ಕಠ್ಮಂಡು: ಉತ್ತರ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಿದ್ದು, ಗಡಿ ಜಿಲ್ಲೆಯಲ್ಲಿರುವ ಹಳ್ಳಿಗಳ ಹಲವು ಮನೆಗಳು ಕೊಚ್ಚಿ ಹೋಗಿವೆ. ಟಿಬೆಟ್ನಲ್ಲಿ ಹಿಮನದಿ ಸ್ಫೋಟ ಸಂಭವಿಸಿದ ಕಾರಣ ಅಪಾರ ಪ್ರಮಾಣದ ನೀರು ಹರಿದುಬಂದು ಪ್ರವಾಹ ಸ್ಥಿತಿ ಎದುರಾಗಿದೆ.ಭೋಟೆ ಕೋಸಿ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿದೆ. ಇದರಿಂದಾಗಿ
ನದಿ ತಟದಲ್ಲಿರುವ ರಸುವಾ ಜಿಲ್ಲೆ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಹಲವು ಹಳ್ಳಿಗಳಲ್ಲಿ ಮನೆಗಳು, ವಾಹನ, ಸೇತುವೆಗಳು ಕೊಚ್ಚಿಹೋಗಿವೆ ಎಂದು ಎಂದು ವರದಿಯಾಗಿದೆ.ರಸುವಾ ಜಿಲ್ಲೆಯು ಕಠ್ಮಂಡುವಿನ ಈಶಾನ್ಯ ಭಾಗದಲ್ಲಿದ್ದು, ಟಿಬೆಟ್ ಗಡಿಯಿಂದ ಸುಮಾರು 125 ಕಿ.ಮೀ ದೂರದಲ್ಲಿದೆ. ಈ ಭೀಕರ ಹಠಾತ್ ಪ್ರವಾಹದಲ್ಲಿ 90 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸುಮಾರು 400 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಕನಿಷ್ಠ 100 ಕ್ಕೂ ಹೆಚ್ಚು ಭಾರತೀಯರು ಸೇರಿದ್ದಾರೆ ಎಂದು ವರದಿ ತಿಳಿಸಿದೆ. ಭಾರತೀಯರು ಹಾಗೂ ಅಮೆರಿಕ, ಮಲೇಷ್ಯಾ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ನ ಪ್ರವಾಸಿಗರು ಸೇರಿದ್ದಾರೆ ಎಂದು ಹೇಳಲಾಗಿದೆ.
ಕಣಿವೆಗಳ ಮೂಲಕ ರಭಸದಿಂದ ನುಗ್ಗಿ ಬರುತ್ತಿರುವ ಮಣ್ಣು ಮಿಶ್ರಿತ ನೀರಿನ ಪ್ರವಾಹದ ಭೀಕರ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.ರಕ್ಷಣಾ ಕಾರ್ಯಕ್ಕಾಗಿ ಬಾಧಿತ ಪ್ರದೇಶಕ್ಕೆ ಹೆಲಿಕಾಪ್ಟರ್ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ನೇಪಾಳ ಸೇನೆ ತಿಳಿಸಿದೆ.









