ಕಠ್ಮಂಡು:ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸುಮಾರು 160 ಜನ ಮೃತಪಟ್ಟಿದ್ದಾರೆ. ಭಾರತೀಯರು ಸೇರಿ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.ಟಿಬೆಟ್ನ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿದೆ. ಟಿಬೆಟ್ ಗಡಿಯಿಂದ ರಭಸವಾಗಿ
ನುಗ್ಗಿದ ಕೆಸರುಮಿಶ್ರಿತ ನೀರಿನಿಂದ ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ.
ನೇಪಾಳ ಪ್ರವಾಸೋದ್ಯಮ ಮಂಡಳಿ ಪ್ರಕಾರ, 291 ವಿದೇಶಿಯರು, 93 ನೇಪಾಳಿ ಪ್ರಜೆಗಳು ಸೇರಿದಂತೆ ಕನಿಷ್ಠ 384 ಯಾತ್ರಿಕರು ಪ್ರವಾಹಬಾಧಿತ ಪ್ರದೇಶದಿಂದ ನಾಪತ್ತೆಯಾಗಿದ್ದಾರೆ. ಭಾರತ, ಅಮೆರಿಕ, ಮಲೇಷ್ಯಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳ ಪ್ರವಾಸಿಗರೂ ನಾಪತ್ತೆ ಯಾದವರಲ್ಲಿ ಸೇರಿದ್ದಾರೆ. ಇವರಲ್ಲಿ ಬಹುತೇಕರು ಪ್ರವಾಸ ಆಯೋಜಕ ಸಂಸ್ಥೆಗಳ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಬಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ದಿಢೀರ್ ಪ್ರವಾಹ ಉಂಟಾಗಿದೆ. ಭೂಕಂಪದಿಂದ ಹಿಮನದಿ ಸ್ಫೋಟಗೊಂಡು ಪ್ರವಾಹ ಉಂಟಾಗಿರಬಹುದು ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ ಖನಾಲ್ ಸಂಸತ್ತಿಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ತುಣುಕುಗಳು ಪ್ರವಾಹದ ಭೀಕರ ರೂಪವನ್ನು ತೆರೆದಿಡುತ್ತವೆ. ಕೆಸರು, ಕಲ್ಲುಗಳು, ಕಟ್ಟಡಗಳ ಅವಶೇಷಗಳೊಂದಿಗೆ ನುಗ್ಗಿದ ನೀರು ಭೋಟೆ ಕೋಶಿ ನದಿ ಪಾತ್ರದುದ್ದಕ್ಕೂ ಹಾನಿ ಉಂಟುಮಾಡಿದೆ ದಟ್ಟ ಮಂಜು ಆವರಿಸಿರುವುದು ಹಾಗೂ ಜನ ಭಯಭೀತರಾಗಿ ಓಡುತ್ತಿರುವ ದೃಶ್ಯಗಳನ್ನು ಕಾಣಬಹುದು. ಪ್ರವಾಹವು ಕೆಲವೇ ಕ್ಷಣಗಳಲ್ಲಿ ನೇಪಾಳದ ಮೂರು ಜಿಲ್ಲೆಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ.ಬಾಧಿತ ಪ್ರದೇಶಗಳ ವಿವಿಧ ಭಾಗಗಳಿಂದ ಹಲವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು ಒದಗಿಸುತ್ತೇವೆ. ಅಲ್ಲಿನ ಸಹೋದರ, ಸಹೋದರಿಯರೊಂದಿಗೆ ಭಾರತೀಯರು ಒಗ್ಗಟ್ಟಿನಿಂದ ನಿಲ್ಲುತ್ತಾರೆ ಎಂದು ಭರವಸೆ ನೀಡಿದ್ದಾರೆ.









