ಟೆಹರಾನ್: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಯಾಗುವವರೆಗೆ ಹೊರ್ಮುಜ್ ಜಲಮಾರ್ಗವನ್ನು ಬಂದ್ ಮಾಡುವಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಘೋಷಿಸಿದೆ.ʼಬಾಹ್ಯ ಶಕ್ತಿಗಳ ಕಾನೂನುಬಾಹಿರ ಹಸ್ತಕ್ಷೇಪದಿಂದ ಉಂಟಾಗಿರುವ
ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆʼ ಎಂದು ಐಆರ್ಜಿಸಿ ತಿಳಿಸಿರುವುದಾಗಿ ವರದಿಯಾಗಿದೆ.ಮುಂದಿನ ಸೂಚನೆ ನೀಡುವವರೆಗೂ ಹೊರ್ಮುಜ್ ಜಲಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗುವುದು. ಅಮೆರಿಕವು ಈ ಭಾಗದಲ್ಲಿ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರಗೆ ಕ್ರಮ ಮುಂದುವರಿಯಲಿದೆ. ಯಾವುದೇ ಹಡಗು ಜಲಮಾರ್ಗದಲ್ಲಿ ಸಂಚರಿಸಲು ಬಿಡುವುದಿಲ್ಲʼ ಎಂದು ಹೇಳಿದೆ.
ಈ ಕ್ರಮಕ್ಕೆ ಪ್ರತಿಯಾಗಿ ಇರಾನ್ ವಿರುದ್ಧ ಕೈಗೊಳ್ಳುವ ಯಾವುದೇ ಮಿಲಿಟರಿ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ನೌಕಾಪಡೆಯೂ ಎಚ್ಚರಿಕೆ ನೀಡಿದೆ.
ಇದನ್ನೇ ನೆಪ ಮಾಡಿಕೊಂಡು ಮತ್ತೊಂದು ದಾಳಿ ನಡೆಸಿದರೆ, ಬಲವಾದ ಪ್ರತಿಕ್ರಿಯೆ ನೀಡಲಾಗುವುದು. ಈ ಪ್ರದೇಶದಲ್ಲಿರುವ ಶತ್ರುಗಳ ಹೆಚ್ಚಿನ ನೆಲೆಗಳು ನಮ್ಮ ಗುರಿಯಾಗಲಿವೆʼ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕತಾರ್ ಸಂಧಾನಕಾರರು ಎರಡು ಬಣದವರೊಂದಿಗೆ ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆಯಾಗಿದೆ.





