ಲಂಡನ್: ಆ.12 ರಂದು ಸಂಭವಿಸಿದ ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಯುರೋಪ್ ಹಾಗೂ ಗ್ರೀನ್ಲ್ಯಾಂಡ್ ಭಾಗಗಳಲ್ಲಿ ಮಧ್ಯಾಹ್ನದ ವೇಳೆಗೆ ಕತ್ತಲು ಆವರಿಸುವಂತೆ ಮಾಡಿತ್ತು. ಯುರೋಪ್,ಗ್ರೀನ್ಲ್ಯಾಂಡ್ ಮತ್ತು ಉತ್ತರ ಅಮೆರಿಕಾದ ಕೆಲವು ಪ್ರದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸಿತ್ತು. ರಾತ್ರಿ ಸಮಯದಲ್ಲಿ
ಸಂಭವಿಸಿದ್ದರಿಂದ ಭಾರತದಲ್ಲಿ ಗೋಚರಿಸಿಲ್ಲ. ಹಗಲಿನಲ್ಲಿ ಕೆಲಕಾಲ ಕತ್ತಲು ಕವಿದ ವಾತಾವರಣ ಕಂಡುಬಂದವು.ಕೋಟ್ಯಂತರ ಜನರಿಗೆ ಅಪರೂಪದ ಖಗೋಳ ವಿಸ್ಮಯ ಕಣ್ಣುಂಬಿಕೊಳ್ಳುವ ಅವಕಾಶ ದೊರೆಯಿತು.1999ರ ಬಳಿಕ ಯುರೋಪ್ ಖಂಡದ ಮುಖ್ಯ ಭೂಭಾಗದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಿದ್ದು,ಚಂದ್ರನು ಭೂಮಿ ಮತ್ತು
ಸೂರ್ಯನ ನಡುವೆ ನೇರವಾಗಿ ಹಾದುಹೋದ ಪರಿಣಾಮ ಹಲವು ಗಂಟೆಗಳ ಕಾಲ ಗ್ರಹಣದ ವಿವಿಧ ಹಂತಗಳು ಗೋಚರಿಸಿದವು. ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಉತ್ತರ ರಷ್ಯಾ, ಸ್ಪೇನ್ ಹಾಗೂ ಪೋರ್ಚುಗಲ್ನ ಭಾಗಗಳಲ್ಲಿ ಸಂಪೂರ್ಣ ಗ್ರಹಣದ ಅನುಭವ ಲಭಿಸಿತು.ಈ ಪ್ರದೇಶಗಳ ಹೊರತಾಗಿ ಯುರೋಪ್ನ ಬಹುಭಾಗ, ವಾಯವ್ಯ ಆಫ್ರಿಕಾ ಹಾಗೂ ಈಶಾನ್ಯ ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸಿತು. ಸಂಪೂರ್ಣ ಗ್ರಹಣ ಸುಮಾರು 2 ನಿಮಿಷ 18 ಸೆಕೆಂಡ್ ಗೋಚರಿಸಿತು ಎಂದು ವರದಿಯಾಗಿದೆ.





































