ವಾಷಿಂಗ್ಟನ್: ನಾಸಾ ಗಗನಯಾನಿ, ಭಾರತೀಯ ಮೂಲದ ಅನಿಲ್ ಮೆನನ್ ಅವರು ರಷ್ಯಾದ ಇಬ್ಬರು ಗಗನಯಾನಿಗಳೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ(ಐಎಸ್ಎಸ್) ನಿಲ್ದಾಣ ತಲುಪಿದ್ದಾರೆ.
ಕಜಕಸ್ತಾನದ ಬೈಕೊನೂರ್ ಕಾಸ್ಮೋಡ್ರೋಮ್ನಿಂದ
ಮಂಗಳವಾರ ಮೆನನ್ ಹಾಗು ರಷ್ಯಾದ ಗಗನಯಾನಿಗಳಾದ
ಪಯೋಟರ್ ಡುಬ್ರೋವ್ ಮತ್ತು ಅನ್ನಾ ಕಿಕಿನಾ ಅವರು ಐಎಸ್ಎಸ್ಗೆ ತೆರಳಿದ್ದಾರೆ.’ರೋಸ್ಕೋಸ್ಮೋಸ್ ಸೋಯಜ್ ಎಂಎಸ್–29’ ಗಗನನೌಕೆಯು ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ರಾತ್ರಿ 8.17ಕ್ಕೆ ನಭಕ್ಕೆ ಹಾರಿತು ರಾತ್ರಿ 11.56ಕ್ಕೆ ಐಎಸ್ಎಸ್ ತಲುಪಿದ ಗಗನಯಾನಿಗಳು ಬುಧವಾರ ಮುಂಜಾನೆ ಸುಮಾರು 2 ಗಂಟೆಗೆ ಐಎಸ್ಎಸ್ ಒಳಗಡೆ ಪ್ರವೇಶಿಸಿದರು.ಈ ಮೂವರು ನಾಸಾ ಗಗನಯಾನಿಗಳಾದ ಜೆಸ್ಸಿಕಾ ಮೀರ್, ಜ್ಯಾಕ್ ಹ್ಯಾಥ್ವೇ ಮತ್ತು ಕ್ರಿಸ್ ವಿಲಿಯಮ್ಸ್, ಯುರೋಪ್ನ ಬಾಹ್ಯಾಕಾಶ ಸಂಸ್ಥೆಯ ಗಗನಯಾನಿ ಸೋಫಿ ಅಡೆನಾಟ್ ಮತ್ತು ರೋಸ್ಕೋಸ್ಮೋಸ್ ಗಗನಯಾನಿಗಳಾದ ಸೆರ್ಗೆ ಕುಡ್–ಸ್ವೆರ್ಚ್ಕೋವ್, ಸೆರ್ಗೆಯ್ ಮಿಕೇವ್ ಮತ್ತು ಆಂಡ್ರೆ ಫೆಡ್ಯಾವ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಎಂಟು ತಿಂಗಳವರೆಗೆ ಇವರು ಅಲ್ಲಿ ವಿವಿಧ ಸಂಶೋಧನೆ ನಡೆಸಲಿದ್ದಾರೆ.
ಅನಿಲ್ ಅವರ ಪೂರ್ವಜರು ಕೇರಳದ ಪಾಲಕ್ಕಾಡ್ನವರು. ಇವರು, ಖ್ಯಾತ ವಕೀಲ ಹಾಗೂ ರಾಜಕಾರಣಿಯಾಗಿದ್ದ ಚೇತ್ತೂರು ಶಂಕರನ್ ನಾಯರ್ ಅವರ ಮರಿಮೊಮ್ಮಗ.ಅನಿಲ್ ಅವರ ತಂದೆ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. ಉಕ್ರೇನ್ನ ಎಲಿಜಬೆತ್ ಸಮೊಲೆಂಕೊ ಅವರನ್ನು ವಿವಾಹವಾಗಿದ್ದರು. 2014ರಿಂದ ಅನಿಲ್ ಮೆನನ್ ನಾಸಾದಲ್ಲಿ ‘ಫ್ಲೈಟ್ ಸರ್ಜನ್’ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಅವರು ‘ಸ್ಪೇಸ್ಎಕ್ಸ್’ ಸೇರಿದರು. ಅವರ ಪತ್ನಿ ಅನ್ನಾ ಮೆನನ್ ಕೂಡ ಗಗನಯಾನಿ.







