ಸುಳ್ಯ: ಪೈಪ್ ಲೈನ್ ಕಾಮಗಾರಿಗೆಂದು ಕಡಿದು ಹಾಕಿದ ರಸ್ತೆ ಬದಿ ಸರಿಯಾಗಿ ಮುಚ್ಚದೆ ಸುಳ್ಯ ನಗರದಲ್ಲಿ ಜನರಿಗೆ ಸಂಚಾರಕ್ಕೆ ತೊಂದರೆ ಆಗುವುದನ್ನು ಪ್ರತಿಭಟಿಸಿ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ಧರಣಿಗೆ ಮುಂದಾದ ಘಟನೆ ನಡೆಯಿತು.ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ನಡೆಯುತ್ತಿದ್ದಂತೆ ನಾಟಕೀಯ ಬೆಳವಣಿಗೆ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ
ಉಮ್ಮರ್ ವಿಷಯ ಪ್ರಸ್ತಾಪಿಸಿ ಆಡಳಿತವನ್ನು ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡರು. ನಗರದಲ್ಲಿ ಒಂದೇ ಒಂದು ಕೆಲಸ ಆಗ್ತಾ ಇಲ್ಲಾ.ಜನರಿಗೆ ನಗರದಲ್ಲಿ ನಡೆದಾಡಲು ಆಗ್ತಾ ಇಲ್ಲ. ನಗರದಲ್ಲಿ ಏನಾಗುತ್ತಾ ಇದೆ ಅಂತಾ ಅಧಿಕಾರಿಗಳಿಗೆ ಗೊತ್ತಿದೆಯಾ. ಮಳೆ ಆರಂಭಗೊಂಡ ಬಳಿಕ ಜನರಿಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಜನರು ಹಿಡಿ ಶಾಪ ಹಾಕುತ್ತಾ ಇದ್ದಾರೆ. ಆಡಳಿತ, ಅಧಿಕಾರಿಗಳು ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ ಅವರು ಎಂಟು ತಿಂಗಳಿನಿಂದ ರಸ್ತೆ ಬದಿ ಅಗೆದು ಹಾಕಿ ಒಂದು ರಸ್ತೆ ಬದಿ ಕೂಡ ಸರಿ ಮಾಡಿಲ್ಲ. ರಸ್ತೆ ಸಮಸ್ಯೆಗೆ ಪರಿಹಾರ ಆಗ್ರಹಿಸಿ
ಸಭೆಯ ಮುಂದೆಯೇ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಧರಣಿಗೆ ಮುಂದಾದರು.

ಈ ಸಂದರ್ಭದಲ್ಲಿ ಕೆ.ಎಸ್.ಉಮ್ಮರ್ ಹಾಗೂ ಎಂ.ವೆಂಕಪ್ಪ ಗೌ ಮಧ್ಯೆ ವಾಗ್ವಾದ ನಡೆದ ಘಟನೆಯೂ ನಡೆಯಿತು. ಕೆ.ಎಸ್.ಉಮ್ಮರ್ ಧರಣಿಗೆ ಮುಂದಾದಾಗ ಅಜೆಂಡಾ ಮುಗಿಯಲಿ ಆಮೇಲೆ ಆ ವಿಷಯ ಮಾತನಾಡುವ ಎಂದು ವೆಂಕಪ್ಪ ಗೌಡರು ಹೇಳಿದರು. ಇದಕ್ಕೆ ಉತ್ತರಿಸಿದ ಉಮ್ಮರ್ ಜನರ ಸಮಸ್ಯೆ ಮೊದಲು ಪರಿಹಾರ ಆಗಲಿ, ಆಮೇಲೆ ಸಭೆ ಮಾಡುವ, ನಾನು ಪಕ್ಷೇತರನಾಗಿ ಆಯ್ಕೆಯಾದವರು ನಮಗೆ ಜನರೇ ಮುಖ್ಯ ಎಂದರು. ಇದಕ್ಕೆ ಉತ್ತರಿಸಿದ ವೆಂಕಪ್ಪ ಗೌಡರು ಆಮೇಲೆ ನೀವು ಕಾಂಗ್ರೆಸ್ ಪಕ್ಷ ಸೇರಿದ್ದೀರಿ ಎಂದಾಗ ನಾನು ಯಾವುದೇ ಪಕ್ಷದ ಸದಸ್ಯತ್ವ ಪಡೆದಿಲ್ಲ, ನಗರ ಪಂಚಾಯತ್ನಲ್ಲಿ ಜನರಿಂದ ಆಯ್ಕೆಯಾದ ಪಕ್ಷೇತರ ಸದಸ್ಯ ಎಂದರು. ಈ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಕೆಲ ಹೊತ್ತು ವಾಕ್ಸಮರ ನಡೆಯಿತು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರಸ್ತೆ ಸಮಸ್ಯೆ ಸಂಬಂಧಿಸಿ ಇಂಜಿನಿಯರ್ಗಳನ್ನು ಕರೆಸಲಾಗಿದೆ. ಅವರು ಬಂದು ಮೀಟಿಂಗ್ ಮಾಡಿದ ಬಳಿಕ ಸರಿಪಡಿಸದಿದ್ದರೆ ನಿಮ್ಮ ಜೊತೆ ನಾವು ಕೂಡ ಪ್ರತಿಭಟನೆಗೆ ಕೈ ಜೋಡಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದ ಕಾರಣ ಉಮ್ಮರ್ ಧರಣಿ ಹಿಂಪಡೆದು ಸಭೆಯಲ್ಲಿ ಭಾಗವಹಿಸಿದರು.