ಅಹಮದಾಬಾದ್: ಮುಂದೆ ನಿಂತು ಕೆಚ್ಚೆದೆಯ ಹೋರಾಟದ ಮೂಲಕ ನಾಯಕನ ಆಟವಾಡಿ ತಂಡವನ್ನು ಮುನ್ನಡೆಸಿದ ಶ್ರೇಯಸ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಐಪಿಎಲ್ ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿತು. ನಾಳೆ(ಮಂಗಳವಾರ)ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ
ಫೈನಲ್ನಲ್ಲಿ ಪಂಜಾಬ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮೊದಲ ಕ್ವಾಲಿಫಯರ್ನಲ್ಲಿ ಪಂಜಾಬ್ ತಂಡವು ಆರ್ಸಿಬಿ ಎದುರು ಸೋತಿತ್ತು. ಕಳೆದ 18 ವರ್ಷಗಳಿಂದ ಐಪಿಎಲ್ನಲ್ಲಿರುವ ಉಭಯ ತಂಡಗಳು ಇದುವರೆಗೂ ಒಂದು ಬಾರಿಯೂ ಪ್ರಶಸ್ತಿ ಜಯಿಸಿಲ್ಲ. ಆದ್ದರಿಂದ ಈ ಬಾರಿ ಟೂರ್ನಿಗೆ ಹೊಸ ಚಾಂಪಿಯನ್ ಲಭಿಸುವುದು ಖಚಿತವಾಗಿದೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಳೆಯಿಂದಾಗಿ ಎರಡು ತಾಸು ವಿಳಂಬವಾಗಿ ಪಂದ್ಯ ಆರಂಭವಾಯಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 203 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ ತಂಡವು 19 ಓವರ್ಗಳಲ್ಲಿ 5 ವಿಕೆಟ್ಗೆ 207 ರನ್ ಗಳಿಸಿ ಜಯ ಸಾಧಿಸಿತು. ಶ್ರೇಯಸ್ ಅಯ್ಯರ್ ಕೇವಲ 41ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 87ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು.ಪ್ರಿಯಾಂಶ್ ಆರ್ಯ 20, ಜೋಶ್ ಇಂಗ್ಲಿಸ್ 38, 87, ನೇಹಲ್ ವಧೇರಾ 48 ರನ್ ಸಿಡಿಸಿ ಉತ್ತಮ ಕೊಡುಗೆ ನೀಡಿದರು.
ಮೊದಲು ಬ್ಯಾಟ್ ಮಾಡಿದ ಮುಂಬೈ ಪರ ತಿಲಕ್
ವರ್ಮಾ (44; 29ಎ, 4X2, 6X2) ಸೂರ್ಯಕುಮಾರ್ ಯಾದವ್ (44; 26ಎ, 4X4, 6X3) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 72 ರನ್ಗಳನ್ನು ಪೇರಿಸಿದರು. ಇದರಿಂದಾಗಿ ತಂಡವು ಸವಾಲಿನ ಮೊತ್ತ ಪೇರಿಸಿತು. ಜಾನಿ ಬೆಸ್ಟೊ (38; 24ಎ,4X3, 6X1) ಮತ್ತು ನಮನ್ ಧೀರ್ (37; 18ಎ, 4X7) ಅವರೂ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ ಇಲ್ಲಿ ಕೇವಲ 8 ರನ್ ಗಳಿಸಿದರು.
ಅಂತಿಮ ಹಂತದ ಓವರ್ಗಳಲ್ಲಿ ಮಿಂಚಿದ್ದ ನಮನ್ ಧೀರ್ ಉತ್ತಮವಾಗಿ ಆಡಿ ಮೊತ್ತವನ್ನು 200 ರ ಗಡಿ ದಾಟಿಸಿದರು. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಪಂದ್ಯವು ಸುಮಾರು 2 ತಾಸು ವಿಳಂಬವಾಗಿ ಆರಂಭವಾಯಿತು. ಆದರೆ ಯಾವುದೇ ಓವರ್ ಕಡಿತ ಮಾಡಲಿಲ್ಲ.