ಸುಳ್ಯ:ಸರಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ವಾರ್ಡ್ಗಳ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ವಾರ್ಡ್ ಸದಸ್ಯರು, ಎಲ್ಲಾ ವಾರ್ಡ್ಗಳ ಅಭಿವೃದ್ಧಿ ವಿಚಾರದಲ್ಲಿ ಸಲಹೆ ಸೂಚನೆ ನೀಡುತ್ತೇವೆ ಎಂದು ನಾಮನಿರ್ದೇಶಿತ ಸದಸ್ಯರು ಪಟ್ಟು ಹಿಡಿದದ್ದು ಜೂ.2ರಂದು ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೆಲ ಕಾಲ ತೀವ್ರ ವಾಗ್ಯುದ್ಧಕ್ಕೆ, ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್ನ
ಹಿರಿಯ ಸದಸ್ಯ ಎಂ.ವೆಂಕಪ್ಪ ಗೌಡ ಹಾಗೂ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರಾದ ಸಿದ್ದಿಕ್ ಕೊಕ್ಕೊ ಹಾಗೂ ರಾಜು ಪಂಡಿತ್ ಮಧ್ಯೆಯೇ ತೀವ್ರ ವಾಕ್ಸಮರ ಏರ್ಪಟ್ಟಿದ್ದು ಕುತೂಹಲಕ್ಕೆ ಕೆರಳಿಸಿತು. ಪೈಪ್ ಲೈನ್ ಕಾಮಗಾರಿಗೆಂದು ರಸ್ತೆ ಬದಿಯಲ್ಲಿ ಅಗೆದು ಹಾಕಿ ಸರಿಯಾಗಿ ಮುಚ್ಚಿಲ್ಲ ಎಂಬ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದಂತೆ ಗಾಂಧಿನಗರದಿಂದ ರಥಬೀದಿ ತನಕ ಮುಖ್ಯ ರಸ್ತೆಯ ಬದಿಯಲ್ಲಿ ರಸ್ತೆ ಬದಿ ಜಲ್ಲಿ ಮಾತ್ರ ತುಂಬಲಾಗಿದೆ, ಜಲ್ಲಿ ಹರಡಿ ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಕೂಡಲೇ ದುರಸ್ತಿ ಮಾಡಬೇಕು ಎಂದು ನಾಮನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೊ ಆಗ್ರಹಿಸಿದರು. ಈ ಸಂದರ್ಭದಲ್ಲಿ
ಕೆರೆಮೂಲೆ ವಾರ್ಡ್ ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ‘ಆ ಭಾಗ ನನ್ನ ವಾರ್ಡ್ನಲ್ಲಿ ಬರುತ್ತದೆ, ನಾನು ಈಗಾಗಲೇ ಅದನ್ನು ಪ್ರಸ್ತಾಪ ಮಾಡಿದ್ದೇನೆ, ನಾಮ ನಿರ್ದೆಶಿತ ಸದಸ್ಯರು ವಾರ್ಡ್ಗಳ ವಿಚಾರ ಮಾತನಾಡುವುದು ಬೇಡ, ಅಲ್ಲಿ ಗೆದ್ದ ಸದಸ್ಯರು ಅವರ ವಾರ್ಡ್ ವಿಚಾರ ನೋಡಿಕೊಳ್ಳುತ್ತಾರೆ ಎಂದರು. ಇದಕ್ಕೆ ಉತ್ತರಿಸಿದ ನಾಮ ನಿರ್ದೇಶಿತ ಸದಸ್ಯರಾದ ಸಿದ್ದಿಕ್ ಹಾಗೂ ರಾಜು ಪಂಡಿತ್ ಮಾತನಾಡಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ 20 ವಾರ್ಡ್ಗಳಲ್ಲಿಯೂ ಸಲಹೆ ಸೂಚನೆಗಳನ್ನು ನೀಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇವರ ಮಧ್ಯೆ ತೀವ್ರ ಚರ್ಚೆ, ವಾಗ್ವಾದ ನಡೆಯಿತು. ನಾಮನಿರ್ದೇಶಿತ ಸದಸ್ಯರು ವಾರ್ಡ್ಗಳ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ ಎಂದು ಕೆಲವು ಬಿಜೆಪಿ ಸದಸ್ಯರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡು ಬಂತು. ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ನಾಮನಿರ್ದೇಶಿತ ಸದಸ್ಯರು ಸಲಹೆ ನೀಡುವುದರ ಜೊತೆಗೆ ಸರಕಾರದಿಂದ ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ತನ್ನಿ ಎಂದು ಹೇಳಿದರು.