ಸುಳ್ಯ: ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆ.29 ರಂದು ನಡೆಯಲಿದೆ. ಆಡಳಿತಾರೂಢ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡಿಲ್ಲ. ಮ್ಯಾರಥಾನ್ ಚರ್ಚೆ, ಅಭಿಪ್ರಾಯ ಸಂಗ್ರಹಣೆಯ ಬಳಿಕ 29 ರಂದು 11 ಗಂಟೆಗೆ ಬಿಜೆಪಿ ನಾಯಕತ್ವ ಅಧ್ಯಕ್ಷ, ಉಪಾಧ್ಯಕ್ಷರ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ
ಬಿಜೆಪಿ ಮುಖಂಡರು ನಗರ ಪಂಚಾಯತ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಕೋರ್ ಕಮಿಟಿ ಸದಸ್ಯರು ಹಾಗೂ ಮುಖಂಡರು ರಹಸ್ಯವಾಗಿ ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಆಯ್ಕೆಯ ಬಗ್ಗೆ ಅಭಿಪ್ರಾಯ ಪಡೆದಿದ್ದಾರೆ. ಆಕಾಂಕ್ಷಿಗಳ ಜೊತೆಯೂ ಚರ್ಚೆ ನಡೆಸಲಾಗಿದೆ. ಅಧ್ಯಕ್ಷತೆ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ. ಅಧ್ಯಕ್ಷರಾಗಲು ಬಿಜೆಪಿಯಿಂದ ಗೆದ್ದ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ಇದೆ. ಆದುದರಿಂದಲೇ ಹಲವು ಮಂದಿ ಆಕಾಂಕ್ಷಿಗಳು ಇದ್ದಾರೆ.
ನಗರ ಪಂಚಾಯತ್ನಲ್ಲಿ ಬಿಜೆಪಿಗೆ 14 ಮಂದಿ ಸದಸ್ಯರ ಬಲ ಇದೆ. ಇದರಲ್ಲಿ ಒಂಭತ್ತು ಮಂದಿ ಮಹಿಳಾ ಸದಸ್ಯರು ಇದ್ದಾರೆ. ಉಪಾಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಎಲ್ಲಾ 20 ಸದಸ್ಯರಿಗೂ ಸ್ಪರ್ಧೆಗೆ ಅವಕಾಶ ಇದೆ. ಆದರೆ ಅಧ್ಯಕ್ಷತೆ ಮಹಿಳೆಗೆ ಮೀಸಲಾದ ಕಾರಣ ಉಪಾಧ್ಯಕ್ಷ ಸ್ಥಾನ ಬಿಜೆಪಿಯ 5 ಮಂದಿ ಪುರುಷ ಸದಸ್ಯರಲ್ಲಿ ಒಬ್ಬರಾಗುವುದು ಖಚಿತ.
ಅಧ್ಯಕ್ಷತೆಗೆ ಬಿಜೆಪಿ ಸದಸ್ಯರಾದ ಶಶಿಕಲಾ ನೀರಬಿದಿರೆ ಹಾಗೂ
ಸರೋಜಿನಿ ಪೆಲ್ತಡ್ಕ ಅವರ ಹೆಸರು ಮುಖ್ಯವಾಗಿ ಕೇಳಿ ಬರುತಿದೆ. ಮಾಜಿ ಉಪಾಧ್ಯಕ್ಷೆ ಸರೋಜಿನಿ ಹಾಗೂ ಹಿರಿಯ ಸದಸ್ಯೆ ಶಶಿಕಲಾ ನೀರಬಿದಿರೆ ಅವರಲ್ಲಿ ಒಬ್ಬರಿಗೆ ಅಧ್ಯಕ್ಷತೆ ಒಲಿಯಬಹುದು ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬಂದಿದೆ. ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಪೂಜಿತಾ, ಪ್ರವಿತಾ ಪ್ರಶಾಂತ್, ಸುಶೀಲ ಜಿನ್ನಪ್ಪ ಇವರಲ್ಲಿ ಒಬ್ಬರನ್ನು ಅನಿರೀಕ್ಷಿತ ಅಧ್ಯಕ್ಷೆ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರಾ ಎಂಬ ಕುತೂಹಲವೂ ಇದೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಬುದ್ಧ ನಾಯ್ಕ ಅವರ ಹೆಸರು ಮುಖ್ಯವಾಗಿ ಕೇಳಿ ಬಂದಿದೆ. ಬಾಲಕೃಷ್ಣ ರೈ, ಸುಧಾಕರ, ನಾರಾಯಣ ಶಾಂತಿನಗರ ಈ ಮೂವರಲ್ಲಿ ಒಬ್ಬರಾಗಿ ಅವಕಾಶ ನೀಡುತ್ತಾರಾ ಎಂದು ಕಾದು ನೋಡಬೇಕಾಗಿದೆ. ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ ಅವರಿಗೆ ಅಧ್ಯಕ್ಷ ಸ್ಥಾನ, ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರಿಗೆ ಉಪಾಧ್ಯಕ್ಷ ಮಾಡುವ ಕುರಿತು,
ಶಶಿಕಲಾ ನೀರಬಿದಿರೆ ಅವರಿಗೆ ಅಧ್ಯಕ್ಷ ಸ್ಥಾನ, ಬುದ್ದ ನಾಯ್ಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖಂಡರ ಮಧ್ಯೆ ಭಾರೀ ಚರ್ಚೆ ನಡೆದಿದೆ. ಒಮ್ಮತದ ಅಭ್ಯರ್ಥಿಯ ನಿರ್ಧಾರ ಮಾಡಿ ನಾಳೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಯಾರು ಅಭ್ಯರ್ಥಿ ಎಂಬುದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವಿನಯಕುಮಾರ್ ಕಂದಡ್ಕ, ಉಪಾಧ್ಯಕ್ಷರಾಗಿದ್ದ ಸರೋಜಿನಿ ಪೆಲ್ತಡ್ಕ ಅವರನ್ನು ಉಪಾಧ್ಯಕ್ಷ-ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಪರಿಗಣಿಸುತ್ತಾರಾ ಅಥವಾ ಹೊಸ ಮುಖಕ್ಕೆ ಅವಕಾಶ ನೀಡುತ್ತಾರಾ ಎಂಬ ಕುತೂಹಲ ಉಳಿದಿದೆ.
ಮೀಸಲಾತಿ ಪ್ರಕಾರ ಎಲ್ಲಾ ಸದಸ್ಯರಿಗೆ ಅವಕಾಶ ಇರುವುದರಿಂದ ಮತ್ತು ಆಕಾಂಕ್ಷಿಗಳು ಹೆಚ್ಚು ಇರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.