ಸುಳ್ಯ:ಕುಡಿಯುವ ನೀರು ಸರಬರಾಜಿಗೆಂದು ಸುಳ್ಯ ನಗರದ ಅಲ್ಲಲ್ಲಿ ರಸ್ತೆಯಲ್ಲಿ ಕಡಿದು ಹಾಕಿರುವ ರಸ್ತೆಯ ಹೊಂಡಗಳು, ಗುಂಡಿಗಳು ಪ್ರಯಾಣಿಕರಿಗೆ ನರಕ ಸದೃಶ್ಯವಾಗಿ ಕಾಡುತಿದೆ.ಅದರಲ್ಲೂ ದಿನಾಲು ಸಾವಿರಾರು ಮಂದಿ ಪ್ರಯಾಣಿಸುವ ಜನ ನಿಬಿಡ ರಸ್ತೆ ಚೆನ್ನಕೇಶವ ದೇವಸ್ಥಾನದ ಬಳಿಯಾಗಿ ಕುರುಂಜಿಭಾಗ್, ಕೇರ್ಪಳ ಕಡೆಗೆ ಸಾಗುವ ರಸ್ತೆಯಂತು ಸಂಪೂರ್ಣ ಎಕ್ಕುಟ್ಟಿ ಹೋಗಿದೆ. ಇಲ್ಲಿ ನಿರಂತರ ಅಪಘಾತ
ನಡೆಯುತ್ತಿದ್ದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ. ಮೇ.23ರಂದು ಸಂಜೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವ ಬೆಚ್ಚಿ ಬೀಳಿಸುವ ಸಿಸಿ ಕ್ಯಾಮರಾ ದೃಶ್ಯ ವೈರಲ್ ಆಗಿದೆ.
ಅಮೃತ್ ಯೋಜನೆಯ ಪೈಪ್ ಅಳವಡಿಕೆಗೆ ಕಾಂಕ್ರೀಟ್, ಡಾಮರು, ಇಂಟರ್ಲಾಕ್ ರಸ್ತೆಗಳನ್ನೇ ಅಗೆದು ಹಾಕಲಾಗಿದೆ. ಅದನ್ನು ಸರಿಯಾಗಿ ಮುಚ್ಚದ ಕಾರಣ ಮಳೆ ಆರಂಭಗೊಂಡಾಗ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲದಂತಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಹೊಂಡ ತೆಗೆದು ಅದನ್ನು ಸಮರ್ಪಕವಾಗಿ ಮುಚ್ಚದೆ, ಮರು ಡಾಮರೀಕರಣ ಅಥವಾ ಕಾಂಕ್ರೀಟ್ ಮಾಡದೆ ಅರ್ಧಂಬರ್ಧ ಮಾಡಿದ್ದಾರೆ. ಮುಖ್ಯ ರಸ್ತೆಯಲ್ಲಿಯೇ ಕೆಲವೆಡೆ ಜಲ್ಲಿ ಮಾತ್ರ ಹಾಕಿದ್ದು ಡಾಮರು, ಕಾಂಕ್ರೀಟ್ ಮಾಡದೇ ಅದು ರಸ್ತೆಯಿಡೀ ಹರಡಿದೆ. ನಗರದಲ್ಲಿ ಅಲ್ಲಲಿ ಹೊಂಡಗಳು, ರಸ್ತೆ ಮಧ್ಯೆ ಪಾತಾಳ ಸದೃಶ್ಯ ಗುಂಡಿಗಳು, ಮಣ್ಣಿನ ದಿಬ್ಬಗಳು, ಕಲ್ಲು ಮಣ್ಣಿನ ರಾಶಿಗಳು, ಕೆಸರು ಹೊಂಡಗಳೇ ರಾರಾಜಿಸುತಿದೆ.

ವಾಹನ ಸವಾರರು ಅಪಘಾತಕ್ಕೀಡಾದ ದೃಶ್ಯ
ಚೆನ್ನಕೇಶವ ದವಸ್ಥಾನದ ಬಳಿಯಲ್ಲಿ ಸಾಗುವ ರಸ್ತೆಯ ಸ್ಥಿತಿಯಂತೂ ಹೇಳ ತೀರದು ನವಂಬರ್ ತಿಂಗಳಲ್ಲಿ ಕೆಲಸ ಆರಂಭಿಸುವಾಗಲೇ ಸಂಬಂಧಪಟ್ಟವರಿಗೆ ಸರಿಯಾಗಿ ಮರುಡಾಮರೀಕರಣ ಮಾಡುವಂತೆ ತಿಳಿಸಲಾಗಿತ್ತು. ಎಲ್ಲವನ್ನೂ ಮೊದಲಿನಂತೆ ಸರಿ ಮಾಡಿಕೊಡುವುದಾಗಿ ಹೇಳಿದ್ದರೈ ಪೈಪ್ ಕಾಮಗಾರಿ ನಿರ್ವಹಿಸುವ ಕಂಪನಿಯವರು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದೆ ಭರವಸೆ ನೀಡಿದ್ದರು. ಆದರೆ ಜಾತ್ರೆ ಕಳೆದು 5 ತಿಂಗಳಾದರೂ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಗಂಭೀರ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಅಲ್ಲದೆ ಒಂದು ಹಂತಕ್ಕೆ ಮಣ್ಣಿನ ಬೆಡ್ ಮೇಲೆ ವಾಹನಗಳು ಸುಗಮವಾಗಿ ಸಂಚರಿಸುತ್ತಿದ್ದಾಗ ರಾತ್ರೋರಾತ್ರಿ ಬಂದು ಮಳೆಯಲ್ಲಿಯೇ ಅಗೆದು ದೊಡ್ಡ ಹೊಂಡಗುಂಡಿಗಳನ್ನು ಎತ್ತರ ತಗ್ಗುಗಳನ್ನು ಮಾಡಿದ್ದಾರೆ. ಸಂಚಾರ ದುಸ್ತರವಾಗಿದ್ದ ಈ ಸಂದರ್ಭದಲ್ಲಿ ರಸ್ತೆಯ ಇನ್ನೊಂದು ಬದಿಯನ್ನು ಸಣ್ಣ ಕಾಮಗಾರಿಗೋಸ್ಕರ ಜಡಿ ಮಳೆಯಲ್ಲಿ ಅಗೆದು ಹೊಂಡ ಮಾಡಿ ಮಣ್ಣಿನಡಿಯಲ್ಲಿ ಇದ್ದಂತಹ ಕೇಬಲನ್ನು ಕಟ್ ಮಾಡಿ ಹಾಕಲಾಗಿದೆ. ಇದರಿಂದ ಎರಡೂ ಕಡೆ ಮಣ್ಣು ಕೆಸರು ತುಂಬಿ,ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆ ಹೊಳೆಯಂತಾಗಿರುತ್ತದೆ.ಇದರ ಮಧ್ಯೆ ಅಪ್ಪಿ ತಪ್ಪಿ ರಸ್ತೆಯಿಂದ ಕೆಳಗಿಳಿದ ವಾಹನಗಳ ಚಕ್ರಗಳು ಹೂತು ಹೋಗುತ್ತಿದೆ.ಅಲ್ಲದೆ ವಿಪರೀತ ವಾಹನ ದಟ್ಟಣೆ ಯೂ ಆಗುತ್ತಿದೆ ಎಂದು ದೇವಸ್ಥಾನದ ರಸ್ತೆ ಬದಿಯ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಹೇಳುತ್ತಾರೆ.