*ಡಾ.ಸುಂದರ ಕೇನಾಜೆ.
ತುಳುನಾಡಿನಲ್ಲೊಂದು ಆಚರಣೆ ಇದೆ. ಅದನ್ನು ಆಚರಣೆ ಎನ್ನುವುದಕ್ಕಿಂತ ಒಂದು ದಿನದ ಕುರಿತಾದ ನಂಬಿಕೆ ಎಂದೂ ಕರೆಯಬಹುದು. ಆ ದಿನವನ್ನು ತುಳುವಿನಲ್ಲಿ “ಪತ್ತನಾಜೆ” ಎಂದು ಕರೆಯುತ್ತಾರೆ. ಪತ್ತ್ ಅಂದರೆ ಹತ್ತು ಎಂದರ್ಥ. ಆಜೆ ಅಂದರೆ ಆಜ್ಞೆ, ಹತ್ತರ ದಿನದ ಆಜ್ಞೆ ಎನ್ನುವುದೇ ಈ ದಿನದ ಮಹತ್ವ. ಇಲ್ಲಿ ಹತ್ತು ಎಂದರೆ ತುಳು ಬೇಸ್ಯ(ಮೇ 24) ತಿಂಗಳ ಹತ್ತನೇಯ ದಿನ, ಆ ದಿನ ಅಲಿಖಿತ ಆಜ್ಞೆಯೊಂದನ್ನು ಪಾಲಿಸಿ ಜಾರಿಗೆ ತರುವುದೇ ಈ ಪತ್ತನಾಜೆ.
ತುಳುನಾಡಿನಲ್ಲಿ ಸೌರಮಾನ ಕಾಲಗಣನೆಯ ಬಿಸು(ವಿಶು, ಏಪ್ರಿಲ್ 14) ಹೊಸ ವರ್ಷದ ಮೊದಲ ದಿನ(ಚಾಂದ್ರಮಾನ ಯುಗಾದಿಯ ಸುಮಾರು 15 ದಿನಗಳ ನಂತರ) ಈ ಹೊಸವರ್ಷದ ಆರಂಭದಿಂದಲೇ ಇಲ್ಲಿ
ಭತ್ತ ಬೇಸಾಯ ಪ್ರಕ್ರಿಯೆಯ ಆರಂಭವೂ ನಡೆಯುತ್ತಿತ್ತು. ಆ ದಿನ ಸಾಂಕೇತಿಕ ಉಳುಮೆ ನಡೆಸಿ, ಅದಕ್ಕೆ ಗೊಬ್ಬರ ಮತ್ತು ಕೈಬಿತ್ತು(ಬೀಜ ಬಿತ್ತನೆ) ಹಾಕಿ, ಬೇಸಾಯದ ಆರಂಭಕ್ಕೆ ಅಣಿಯಾಗುತ್ತಿದ್ದರು. ಅದೇ ದಿನ ಹಿಂದಿನ ವರ್ಷದ ಲೆಕ್ಕಾಚಾರಗಳು, ಮುಂದಿನ ವರ್ಷದ ಗೇಣಿ-ಒಕ್ಕಲು ತೀರ್ಮಾನಗಳು ಎಲ್ಲವೂ ನಡೆಯುತ್ತಿತ್ತು. ಒಕ್ಕಲು ಮಸೂದೆ ಜಾರಿಗೆ ಬರುವ ಮೊದಲು ಅದೇ ದಿನ ಬೆಳಿಗ್ಗೆ ಧನಿಗಳ ಮನೆಗೆ ಕಾಣಿಕೆ(ಕಣಿ) ಸಲ್ಲಿಸಿ, ಮುಂದಿನ ವರ್ಷದ ಗೇಣಿ ಭೂಮಿಗಾಗಿ ಧನಿಗಳನ್ನು ಒಲಿಸಿಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಧನಿ ಸಂತೃಪ್ತನಾದರೆ ಭೂಮಿಯನ್ನು ಮತ್ತೆ ಗೇಣಿಗೆ ಕೊಡುವ, ಇಲ್ಲದೇ ಹೋದರೆ ಅದೇ ಭೂಮಿಯನ್ನು ಕಸಿದುಕೊಳ್ಳುವ ಯಾವುದಾದರೂ ಒಂದು ನಿರ್ಣಯ ಆ ದಿನದಂದೇ ನಡೆಯುತ್ತಿತ್ತು. ಕೆಲವರ ಪಾಲಿಗೆ ಬಿಸು(ಹೊಸ ವರ್ಷ) ಸಂತಸ, ಸಂಮೃದ್ಧಿಯ ದಿನವಾದರೆ, ಇನ್ನು ಕೆಲವರ ಪಾಲಿಗೆ ಅದು ವರ್ಷ ಪೂರ್ತಿ ಕರಾಳವಾಗುವ ಸಾಧ್ಯತೆಯೂ ಇತ್ತು. ಭೂ ಮಸೂದೆ ಜಾರಿ ಬಂದ ನಂತರ ಇವೆಲ್ಲವೂ ತಲೆಕೆಳಗಾದದ್ದೂ ಹೌದು. ಬಿಸುವಿನ ದಿನ ಭೂಮಿ ಪಡೆದ ಒಕ್ಕಲಿನವ ಮತ್ತು ಈಗಾಗಲೇ ಭೂಮಿ ಹೊಂದಿರುವ ಧನಿಕ ಬೇಸಾಯ ಪ್ರಕ್ರಿಯೆಯನ್ನು ಆರಂಭಿಸಲು ಅಣಿಯಾಗುವ ಒಂದು ನಿರ್ದಿಷ್ಟ ಆಚರಣಾತ್ಮಕ ದಿನವನ್ನು ತುಳುವರು ಪತ್ತನಾಜೆ ಎಂದು

ನಿಗದಿಪಡಿಸಿದ್ದರು(ಭತ್ತ ಬೇಸಾಯ ಪೂರ್ಣ ಕಣ್ಮರೆಯಾದರೂ ಇಂದಿಗೂ ಕೆಲವೊಂದು ಆಚರಣೆ ಜಾರಿಯಲ್ಲಿದೆ)
ಪತ್ತನಾಜೆ ಕಳೆದ ಮರುದಿನದಿಂದ ತುಳುನಾಡಿನ ತುಂಬೆಲ್ಲ ಬೇಸಾಯದ್ದೇ ದಿನಚರಿ. ಹಾಗಾಗಿ ಆ ದಿನದಿಂದ ತುಳುನಾಡಿನ ಎಲ್ಲ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಚುವಟಿಕೆಗೆಗಳಿಗೆ ಪೂರ್ಣ ವಿರಾಮ ಹಾಕಬೇಕೆಂಬ ವಿಧಿನಿಷೇಧವೊಂದು ಇಂದಿಗೂ ಜಾರಿಯಲ್ಲಿದೆ. ಸಾಮಾನ್ಯವಾಗಿ ಮಳೆಗಾಲ ಕಳೆದು ಚಳಿಗಾಲ ಆರಂಭವಾಗುವ ಅಕ್ಟೋಬರ್ ತಿಂಗಳ ನವರಾತ್ರಿ(ಮಾರ್ನೆಮಿ) ಕಾಲದಲ್ಲಿ ತುಳುನಾಡಿನಲ್ಲಿ ಹಬ್ಬಗಳ ಆಚರಣೆ, ಕೋಲ, ನೇಮ, ಜಾತ್ರೆ, ವೇಷ, ಕುಣಿತ, ಬಯಲಾಟಗಳು ಗರಿಗೆದರುತ್ತಿದ್ದವು. ಆ ದಿನದಿಂದ ಯಕ್ಷಗಾನದ ಮೇಳಗಳು ಅಧಿಕೃತವಾಗಿ ಗೆಜ್ಜೆ ಕಟ್ಟಿ ಪ್ರದರ್ಶನ ನೀಡುವುದು, ದೈವದೇವರುಗಳ ಆರಾಧನೆ ಆರಂಭಗೊಳ್ಳುವುದು, ಮದುವೆ ಹಾಗೂ ಇನ್ನಿತರ ಸಾಮಾಜಿಕ ಉತ್ಸವಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿತ್ತು. ತುಳುನಾಡಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ ಬರುವ ನವರಾತ್ರಿಯಿಂದ ಸುಮಾರು ಆರು ತಿಂಗಳ ಕಾಲ ನಿರಂತರ ಕಾರ್ಯಕ್ರಮಗಳು ಎಲ್ಲೆಂದರಲ್ಲಿ ನಡೆಯುತ್ತಲೇ ಇರುತ್ತಿದ್ದವು. ತಮ್ಮ ಕೃಷಿಕಾರ್ಯಗಳನ್ನು ಮರೆತು ಜನ ಈ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಎಡೆಬಿಡದೆ ಪಾಲ್ಗೊಳ್ಳುತ್ತಿದ್ದರು. ಜತೆಗೆ ಮಹತ್ವದ ಬೇರೆ ಕೃಷಿ ಚಟುವಟಿಕೆ ಇಲ್ಲದೇ ಇದ್ದುದರಿಂದ ಏಣಿಲು ಅಥವಾ ಸುಗ್ಗಿ ಬೇಸಾಯದಿಂದ ಪಡೆದ ಭತ್ತದ ಬಳಕೆಯನ್ನು ಮಾಡುತ್ತಾ ಆ ಕಾಲದಲ್ಲಿ ಸಿಗುವ ಫಲವಸ್ತುಗಳನ್ನೇ ಆಶ್ರಯಿಸುತ್ತಾ ಬೇಸಿಗೆ ಕಳೆಯುತ್ತಿದ್ದರು.

ಮೇ ತಿಂಗಳು ಆರಂಭವಾಗುತ್ತಿದ್ದಂತೆ ತುಳುನಾಡು(ಕರಾವಳಿ ಭಾಗ) ಮತ್ತೆ ಮಳೆಯ ಕಾರ್ಮೋಡಗಳ ಸೆಳೆತಕ್ಕೆ ಒಳಗಾಗುತ್ತಿತ್ತು. ಅಲ್ಲಿಲ್ಲ ಸಣ್ಣ ಪ್ರಮಾಣದ ಮಳೆ ಸುರಿಯಲು ಆರಂಭವಾಗುತ್ತಿದ್ದಂತೆ ಇಲ್ಲಿನ ಭತ್ತ ಬೇಸಾಯಗಾರರು ಮತ್ತೆ ತಮ್ಮ ಬೇಸಾಯ ವೃತ್ತಿಯ ಕಡೆಗೆ ಮುಖ ಮಾಡುತ್ತಿದ್ದರು. ಉಳುಮೆಗೆ ಎತ್ತು ಕೋಣಗಳನ್ನು ಖರೀದಿಸುವ, ಅವುಗಳಿಗೆ ಕೆಲಸ ಕಲಿಸುವ ಪ್ರಕ್ರಿಯೆಗಳು ಒಂದೆಡೆಯಿಂದ ನಡೆಯುತ್ತಿದ್ದರೆ, ಒಂದು ನಿಗದಿತ ದಿನದಿಂದ ಎಲ್ಲ ಬಾಹ್ಯ ಚಟುವಟಿಕೆಯನ್ನು ತಕ್ಷಣದಿಂದ ನಿಲ್ಲಿಸಿ ಬೇಸಾಯಕ್ಕೆ ಪೂರ್ಣ ತೊಡಗಿಸಿಕೊಳ್ಳಬೇಕೆಂಬ ಎಚ್ಚರಿಗೆಗೂ ಒಳಗಾಗಿದ್ದರು. ಆ ನಿಗದಿತ ದಿನವೇ ಈ ಪತ್ತನಾಜೆ. ಅದುವರೆಗೂ ಸುಮಾರು ಆರೇಳು ತಿಂಗಳು ತಿರುಗಾಟ ನಡೆಸಿದ ಯಕ್ಷಗಾನದ ಮೇಳಗಳು ಈ ದಿನ ಅಂತಿಮ ಪ್ರದರ್ಶನ ನೀಡಿ ಗೆಜ್ಜೆ ಬಿಚ್ಚುತ್ತವೆ(ಇಂದಿಗೂ ಈ ಪದ್ಧತಿ ಸಾಂಕೇತಿಕವಾಗಿ ಇದೆ) ಅದೇ ದಿನ ಎಲ್ಲಾ ಭೂತಾರಾಧನೆಯ ಕೊನೆಯ ಕೋಲ ರೂಪದ ಕ್ರಿಯಾಚಣೆಗಳು ನಡೆಯುತ್ತವೆ(ನಂತರ ಭೂತಗಳನ್ನು ಘಟ್ಟಕ್ಕೆ ಕಳುಹಿಸಲಾಗುವುದು ಎಂಬ ನಂಬಿಕೆ) ಪತ್ತನಾಜೆಯ ನಂತರ ಯಾವುದೇ ಜಾತ್ರೆ ತುಳುನಾಡಿನಲ್ಲಿ ನಡೆಯುವಂತಿಲ್ಲ(ಜಾತ್ರೆಯ ಕೊಡಿ(ಧ್ವಜ) ಇಳಿಯಬೇಕು, ಗದ್ದೆಯ ಕೊಡಿ(ಚಿಗುರು) ಏರಬೇಕು) ಯಾವುದೇ ಮದುವೆ ಇನ್ನಿತರ ಶುಭ ಕಾರ್ಯಗಳೂ ನಡೆಯಬಾರದು. ಆ ದಿನ ಹತ್ತು ಹನಿ(ಪತ್ತ್ ಪನಿ)ಯಾದರೂ ಮಳೆ ಬರಬೇಕು ಎಂಬ ಜನಪದ ನಂಬಿಕೆಯೂ ಇದೆ!
ಹೀಗೆ ತುಳುನಾಡಿನಲ್ಲಿ ಪತ್ತನಾಜೆ ಎಂಬ ನಿರ್ದಿಷ್ಟ ದಿನದ ನಂತರ ಇತರ ಯಾವ ಚಟುವಟಿಕೆಯೂ ನಡೆದೇ ಕೇವಲ ಭತ್ತದ ಬೇಸಾಯ ಮಾತ್ರ ನಡೆಯಬೇಕು ಎನ್ನುವ ನೆಲೆಯಿಂದ ಎಲ್ಲ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು ಕಂಡು ಬರುತ್ತದೆ. ವೃತ್ತಿಯೊಂದಕ್ಕೆ ತುಳು ಬದುಕಿನಲ್ಲಿ ಎಷ್ಟು ಪ್ರಾಮುಖ್ಯ ನೀಡಲಾಗಿತ್ತು ಎನ್ನುವುದಕ್ಕೆ ಪತ್ತನಾಜೆಯ ಕುರಿತ ನಂಬಿಕೆ ಮತ್ತು ವಿಧಿನಿಷೇಧಗಳೇ ಸಾಕ್ಷಿ. ಯಕ್ಷಗಾನದ ಮೇಳಗಳಲ್ಲಿ ತಿರುಗಾಡುವ ವ್ಯಕ್ತಿ (ಕಲಾವಿದ) ಕೂಡ ತನ್ನ ಮನೆಯ ಬೇಸಾಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ, ಭೂತಾರಾಧನೆ ನಿಲ್ಲಿಸಿ ಆ ಸಮುದಾಯವೂ ಬೇಸಾಯದ ಕಾರ್ಮಿಕರಾಗಿ ಸೇರಿಕೊಳ್ಳುವ, ಮುಂದಿನ ಐದಾರು ತಿಂಗಳು ಯಾವ ಕಾರ್ಯಚಟುವಟಿಕೆಗಳನ್ನೂ ಮಾಡದೇ ಬೇಸಾಯದ ಗದ್ದೆ ಇರಲಿ, ಇಲ್ಲದಿರಲಿ ಎಲ್ಲರೂ ಕೃಷಿಕರಾಗಿ ಅಥವಾ ಕೃಷಿ ಕಾರ್ಮಿಕರಾಗಿ ಜಾಗೃತವಾಗಿರುವ ನೆಲೆಯಲ್ಲಿ ಎಚ್ಚೆತ್ತುಕೊಳ್ಳುವ ಆಚರಣೆಯೇ ಈ ಪತ್ತನಾಜೆ.
ತುಳುನಾಡಿನಲ್ಲಿ ಇಂದು ಭತ್ತದ ಗದ್ದೆಗಳಿಲ್ಲ, ವಾಣಿಜ್ಯ ಬೆಳೆ ಅಥವಾ ನಿವೇಶನಗಳಲ್ಲಿ ಅಸ್ತಿಗಳು ಹಂಚಿಹೋಗಿವೆ. ಹಾಗಾಗಿ ನಿಗದಿತ ದಿನದಿಂದ ಎಚ್ಚೆತ್ತುಕೊಳ್ಳುವ ಅನಿವಾರ್ಯವೂ ಇಲ್ಲ. ಪರಿಣಾಮ ಮಳೆ ಬಿಸಿಲು ಚಳಿಯೆನ್ನದೇ ಉತ್ಸವಗಳಿಗೇನೂ ಕರಾವಳಿಯಲ್ಲಿ ಕೊರತೆ ಇಲ್ಲ. ಆದರೂ ಸಾಕೇತಿಕವಾಗಿ ಈ ಪತ್ತನಾಜೆ ಇಂದಿಗೂ ತುಳು ಜನಪದರ ಪಾಲಿನ ನಿಲುಗಡೆಯ ಕಾಲ. ಅನ್ನದ ಬಟ್ಟಲಿನ್ನೊಂದಿಗೆ ಜವಾಬ್ಧಾರಿಯನ್ನು ನೆನಪಿಸುವ ಕಾಲ. ಕರಾವಳಿಯ ಪ್ರಾಕೃತಿಕ ವೈಪರೀತ್ಯಗಳು ಕಾಲದ ಹೊಡೆತಕ್ಕೆ ಸಿಗದೇ ಸಾಗುತ್ತಿದ್ದರೂ ಭೌತಿಕ ಸಂಗತಿಗಳು ತೀವೃ ಸ್ಥಿತ್ಯಂತರಕ್ಕೊಳಪಟ್ಟಿವೆ, ಇವೇ ಎಲ್ಲಾ ಬೇಕು- ಬೇಡಗಳನ್ನು ತೀರ್ಮಾನಿಸುವ ಹಂತದಲ್ಲೂ ಇವೆ.

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು ಹಾಗೂ ಜಾನಪದ ಸಂಶೋಧಕರು)