ಸುಳ್ಯ: ಅಂಬೇಡ್ಕರ್ ಭವನ ಸೇರಿದಂತೆ ಸುಳ್ಯ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನಕ್ಕೆ ಬೇಡಿಕೆ ಇರಿಸಿ ಎಲ್ಲಾ ಸಚಿವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಸರಕಾರದಿಂದ ಯಾವುದೇ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ.13ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿದರು. ರಸ್ತೆಗಳ ಅಭಿವೃದ್ಧಿಗೆ
ಗ್ರಾಮೀಣಾಭಿವೃದ್ಧಿ ಇಲಾಖೆಯ ವತಿಯಿಂದ 10 ಕೋಟಿ ರೂಗಳ ಪ್ರಸ್ತಾವನೆ ಕೇಳಿದ್ದು ಬಿಟ್ಟರೆ ಇತರ ಅನುದಾನಗಳು ಬಂದಿಲ್ಲ.
ಕೆಎಸ್ಆರ್ಟಿಸಿ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಸಿಬ್ಬಂದಿ ನೇಮಕ ಬೇಡಿಕೆಯೂ ಈಡೇರಿಲ್ಲ ಎಂದು ಶಾಸಕರು ಹೇಳಿದರು.
ಸುಳ್ಯ ತಾಲೂಕಿನಲ್ಲಿ ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳ ಹಾಗೂ ಅಧಿಕಾರಿಗಳ ತಂಡ ರಚಿಸಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಈ ಕುರಿತ ಪ್ರಶ್ನೆಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಉತ್ತರಿಸಿದರು.

ಕೊಲ್ಲಮೊಗ್ರ ಗ್ರಾಮದ ಪನ್ನೆ ಎಂಬಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಹಾಸ್ಟೇಲ್ಗಳಲ್ಲಿ ವಾರ್ಡನ್ಗಳ ಹುದ್ದೆಯ ಕೊರತೆಯ ಬಗ್ಗೆ ಚರ್ಚೆ ನಡೆದು ವಾರ್ಡನ್ಗಳ ನೇಮಕಕ್ಕೆ ಸರಕಾರಕ್ಕೆ ಬರೆಯಲು ನಿರ್ಧರಿಸಲಾಯಿತು. ಆನೆಗಳ ಹಾವಳಿ ಭಾದಿತ ಗ್ರಾಮಗಳಲ್ಲಿ ಅನೆ ಹಾವಳಿ ತಡೆಯಲು ಸೋಲಾರ್ ಬೇಲಿ ಅಳವಡಿಕೆ ಮತ್ತಿತರ ತಡೆ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳು ಹಾಗೂ ನಗರದಲ್ಲಿ ಅನುಷ್ಠಾನವಾಗುವ ನೀರಿನ ಪೈಪ್ ಅಳವಡಿಕೆಗೆ ರಸ್ತೆ ಬದಿ ಕಡಿದು ಹಾಕಿರುವುದನ್ನು ಕೂಡಲೇ ಪೂರ್ವ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲು ಶಾಸಕರು ಸೂಚಿಸಿದರು.
ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಇಲ್ಲದೆ ರಕ್ತ ಪೂರೈಕೆಗೆ ತೀವ್ರ ಸಮಸ್ಯೆ ಆಗುತ್ತಿರುವುದರ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾ ಕೇಂದ್ರದಿಂದ ದೂರ ಇರುವ ಕಾರಣ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸುಳ್ಯಕ್ಕೆ ಬ್ಲಡ್ ಬ್ಯಾಂಕ್ ಒದಗಿಸಲು ಸರಕಾರಕ್ಕೆ ಬರೆಯಲು ನಿರ್ಧರಿಸಲಾಯಿತು. ತಾಲೂಕಿನಲ್ಲಿ ಶಂಕಿತ ಡೆಂಗೆ ಪ್ರಕರಣ ಪತ್ತೆಯಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ತಿಳಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾವು ಕಡಿತ, ಹುಚ್ಚು ನಾಯಿ ಕಡಿತಕ್ಕೆ ಔಷಧಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.

ತಾಲೂಕು ಕೇಂದ್ರದಲ್ಲಿ ಆಧಾರ್ ಕೇಂದ್ರ ಇಲ್ಲದೆ ತೀವ್ರ ಸಮಸ್ಯೆ ಆಗುತಿದೆ ಎಂದು ಕೆಡಿಪಿ ಸದಸ್ಯ ಧರ್ಮಪಾಲ ಕೊಯಿಂಗಾಜೆ ಸಭೆಯ ಗಮನಕ್ಕೆ ತಂದರು. ಆಧಾರ್ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತಿದೆ ಎಂದು ಶಾಸಕರು ತಿಳಿಸಿದರು.
ಅಕ್ರಮ ಸಕ್ರಮ ಕಡತಗಳ ವಿಲೇವಾರಿ, 94ಸಿ ಸೇರಿದಂತೆ ತಾಲೂಕು ಕಚೇರಿಯಲ್ಲಿ ಜನ ಸಾಮಾನ್ಯರ ಕೆಲಸ ಆಗುತ್ತಿಲ್ಲ ಎಂದು ಕೆಡಿಪಿ ಸದಸ್ಯ ತೀರ್ಥರಾಮ ಜಾಲ್ಸೂರು ಹೇಳಿದರು. ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ವಿಳಂಬ ಆಗುವುದು ಯಾಕೆ ಎಂದು ಕೆಡಿಪಿ ಸದಸ್ಯ ಪರಮೇಶ್ವರ ಕೆಂಬಾರೆ ಪ್ರಶ್ನಿಸಿದರು. ಈ ಕುರಿತು ಕ್ರಮಕ್ಕೆ ಶಾಸಕರು ತಹಶೀಲ್ದಾರ್ಗೆ ಸೂಚಿಸಿದರು.
ವಿದ್ಯುತ್ ಸಮಸ್ಯೆ ಬಂದರೆ ಕೂಡಲೇ ಸ್ಪಂದಿಸಿ ಪರಿಹರಿಸಿ ಎಂದು ಮೆಸ್ಕಾಂಗೆ ಸೂಚಿಸಲಾಯಿತು. ಸುಳ್ಯದ ಪುರಭವನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ ಎಂದು ಶಾಸಕರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳಾ.ಎಂ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.