ಸುಳ್ಯ: ನಗರದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಸುಳ್ಯ ನಗರ ಪಂಚಾಯತ್ನಲ್ಲಿ ಇಷ್ಟು ಸಮಸ್ಯೆಗಳು ತಾಂಡವವಾಡುತ್ತಿರುವಾಗ ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು ಟೂರ್ ಹೋಗುವುದು ಎಷ್ಟು ಸರಿ.. ಎಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಕೆಡಿಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. ತಾಲೂಕು ಪಂಚಾಯತ್ ಸಭಾಂಗಣದಲ್ಲಿ
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಜೂ.13ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರ ಪಂಚಾಯತ್ನ ಅಧ್ಯಯನ ಪ್ರವಾಸ ತೀವ್ರ ಚರ್ಚೆಗೆ ಗ್ರಾಸವಾಯಿತು.
ನಗರದಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿ ಹಲವು ಸಮಸ್ಯೆಗಳು ಇರುವಾಗ ನಗರ ಪಂಚಾಯತ್ ಆಡಳಿತ, ವಿಪಕ್ಷ ಸದಸ್ಯರು, ಅಧಿಕಾರಿಗಳು ಎಲ್ಲರೂ ಟೂರ್ ಹೋಗುವುದು ಎಷ್ಟು ಸರಿ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ತೀರ್ಥರಾಮ ಜಾಲ್ಸೂರು, ಆಶ್ರಫ್ ಗುಂಡಿ, ಪರಮೇಶ್ವರ ಕೆಂಬಾರೆ ಆಕ್ಷೇಪ ವ್ಯಕ್ತಪಡಿಸಿದರು.ನಗರದಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬದಿ ಕಡಿದು ಹಾಕಿ ಸರಿಪಡಿಸದ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು. ಅವರು ಘನ ತ್ಯಾಜ್ಯ ಘಟಕದ ಅಧ್ಯಯನಕ್ಕಾಗಿ ಅನುಮತಿ ಪಡೆದೇ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ, ಎಲ್ಲಾ ಇಲಾಖೆ, ಜನಪ್ರತಿನಿಧಿಗಳು ಈ ರೀತಿ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ, ಆ ಕುರಿತು ಇಲ್ಲಿ ಚರ್ಚೆ ಬೇಡ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಕೆಡಿಪಿ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ಮಧ್ಯೆ ಕೆಲ ಹೊತ್ತು ವಾಗ್ವಾದ ನಡೆಯಿತು. ನಗರದಲ್ಲಿ ಇಷ್ಟು ಸಮಸ್ಯೆ ಇರುವಾಗ ಪ್ರವಾಸ ಹೋಗುವ ಸಮಯ ಇದಾ.. ಇಷ್ಟು ಸಮಸ್ಯೆ ಇರುವಾಗ ಅದರ ಬಗ್ಗೆ ಗಮನ ಹರಿಸದೇ ಅಧ್ಯಯನ ಪ್ರವಾಸ ಮಾಡುವುದು ಎಷ್ಟು ಸರಿ ಎಂದು ಕೆಡಿಪ ಸದಸ್ಯರು, ಗ್ಯಾರಂಟಿ ಸಮಿತಿ ಅಧ್ಯಕ್ಷರು ಪ್ರಶ್ನಿಸಿದರು.