ಸುಳ್ಯ:ಮೆಸ್ಕಾಂ ಜನ ಸಂಪರ್ಕ ಸಭೆ ನಡೆಸುವಾಗ ಆ ವಿಷಯವನ್ನು ಸಲಹಾ ಸಮಿತಿ ಸದಸ್ಯರಿಗೆ ಮತ್ತು ಜನರಿಗೆ ತಿಳಿಸಲೇ ಬೇಕು. ಸಭೆಗಳಲ್ಲಿ ಜನರ ಸಮಸ್ಯೆಗಳು ಚರ್ಚಿಸಿ ಅದರ ಪರಿಹಾರಸ ಅನುಷ್ಠಾನ ಆಗಬೇಕೇ ವಿನಹಾ ಕೇವಲ ಕಾಟಾಚಾರಕ್ಕೆ ಸಭೆಗಳು ನಡೆಯುವಂತಾಗಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಮೆಸ್ಕಾಂ ಜನ ಸಂಪರ್ಕ ಸಭೆ ರದ್ದಾದ ಹಿನ್ನಲೆಯಲ್ಲಿ
ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಲಹಾ ಸಮಿತಿ ಸಭೆ ಕಾಲ ಕಾಲಕ್ಕೆ ನಡೆಯಬೇಕು, ಸಭೆಯ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಲಹಾ ಸಮಿತಿ ಸದಸ್ಯರಿಗೂ ಇದೆ. ಈ ಹಿನ್ನಲೆಯಲ್ಲಿ ಎಲ್ಲಾ ಸಲಹಾ ಸಮಿತಿ ಸದಸ್ಯರ ಸಭೆ ಕರೆದು ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದರು. ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಯನ್ನು ತಳ್ಳಿ ಹಾಕಿದ ಅವರು ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದರು.
ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸಲು ಸಭೆಯಲ್ಲಿ ಒತ್ತಾಯ:
ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಧಾಕೃಷ್ಣ ಬೊಳ್ಳೂರು ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದರು. ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ಬೇರೆಲ್ಲೋ ಸಮಸ್ಯೆ ಬಂದರೆ ನಗರದಲ್ಲಿ ವಿದ್ಯುತ್ ಕಡಿತ ಆಗುವಂತೆ ಆಗಬಾರದು, ವಿದ್ಯುತ್ ಸಮಸ್ಯೆ ಉಂಟಾದರೆ ಮೆಸ್ಕಾಂ ಇಂಜಿನಿಯರ್ಗಳು ಮತ್ತು ಸಿಬ್ಬಂದಿಗಳು ಗ್ರಾಹಕರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಸಲಹಾ ಸಮಿತಿ ಸಭೆ ನಡೆಯಬೇಕು, ಎಲ್ಲರಿಗೂ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.













