ಸುಳ್ಯ:ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಆರಂಭಿಸಿ ಹಲವು ವರ್ಷಗಳೇ ಕಳೆದರೂ ಪೂರ್ತಿಯಾಗದ ಹಿನ್ನಲೆಯಲ್ಲಿ
ಸುಳ್ಯ ತಾಲೂಕು ಪ.ಜಾತಿ, ಪ.ಪಂಗಡದವರ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವಿಷಯದ ಕುರಿತು ಭಾರೀ ಚರ್ಚೆ ನಡೆದು ಅಂಬೇಡ್ಕರ್ ಭವನದ ನಿರ್ಮಾಣದ ಕುರಿತು ಚಿತ್ರಣ ನೀಡದಿದ್ದರೆ ಜು.9ರಂದು ನಡೆಯುವ ಜನತಾದರ್ಶನ ಸಭೆಗೆ
ಕಪ್ಪು ಪಟ್ಟಿ ಧರಿಸಿ ಭಾಗವಹಿಸುವುದಾಗಿ ಮುಖಂಡರು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ.ಜಾತಿ, ಪ.ಪಂಗಡದವರ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ವಿಳಂಬ ಕುರಿತು ನಂದರಾಜ ಸಂಕೇಶ್ ಪ್ರಸ್ತಾಪಿಸಿದರು.15 ವರ್ಷಗಳ ಹಿಂದೆ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದರೂ ಇಂದಿಗೂ ಪೂರ್ತಿ ಆಗಿಲ್ಲ. ಇದು ದುರದೃಷ್ಟಕರ ಎಂದರು. ಆನಂದ ಬೆಳ್ಳಾರೆ ಮತನಾಡಿ ಪ್ರತೀ ಸಭೆಯಲ್ಲಿಯೂ ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಒತ್ತಾಯಿಸಿದರೂ ಆಗುತ್ತಿಲ್ಲ. ಆದ್ದರಿಂದ ಜು.9ರಂದು
ಜನತಾದರ್ಶನ ಸಭೆಯ ಒಳಗೆ ಈ ಕುರಿತು ಸ್ಪಷ್ಟ ಚಿತ್ರಣ ನಮಗೆ ನೀಡದಿದ್ದರೆ, ನಾವು ಕಪ್ಪು ಪಟ್ಟಿ ಧರಿಸಿ ಭಾಗವಹಿಸುತ್ತೇವೆ ಎಂದು ಹೇಳಿದರು. ಅಂಬೇಡ್ಕರ್ ಭವನ ಕಾಮಗಾರಿ ಕುರಿತು ಚರ್ಚಿಸಲು ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಶೀಘ್ರ ನಡೆಸಲಾಗುವುದು ಎಂದು ತಾ.ಪಂ ಇ.ಒ ರಾಜಣ್ಣ ಹೇಳಿದರು.ಕಲ್ಮಕಾರು ಗುಳಿಕಾನದಲ್ಲಿ ಪ್ರಾಕೃತಿಕ ವಿಕೋಪ ಉಂಟಾದ ಸ್ಥಳದಲ್ಲಿ ಮನೆ ಮಂಜೂರಾದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಒಂದು ತಿಂಗಳಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಗ್ರಾಮಗಳಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ ಬಲಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.
ವೇದಿಕೆಯಲ್ಲಿ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ ಇಒ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಮಾಜ ಸಹಾಯಕ ನಿರ್ದೇಶಕಿ ಉಮಾ ದೇವಿ, ಎಸ್ಐ ಸರಸ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಪ್ರೊಬೇಷನರಿ ಎಸಿಎಫ್ ಶಿವಾನಂದ್ ಉಪಸ್ಥಿತರಿದ್ದರು.
ಪ್ರಮುಖರಾದ ಆನಂದ ಬೆಳ್ಳಾರೆ, ನಂದರಾದ ಸಂಕೇಶ, ಅಚ್ಚುತ ಮಲ್ಕಜೆ, ಪರಮೇಶ್ವರ ಕೆಂಬಾರೆ, ಚಂದ್ರಶೇಖರ ಪಳ್ಳತ್ತಡ್ಕ, ಸತೀಶ್ ಬೂಡುಮಕ್ಕಿ, ವಿಶ್ವನಾಥ ಅಲೆಕ್ಕಾಡಿ, ಕರುಣಾಕರ ಪಳ್ಳತ್ತಡ್ಕ, ಸಂಜಯ ಕುಮಾರ್ ಪೈಚಾರ್, ಶಂಕರ ಪೆರಾಜೆ, ಬಾಬು ಜಾಲ್ಸೂರು, ಶೀನಪ್ಪ ಬಯಂಬು, ಸುಂದರ ಪಾಟಾಜೆ ಮತ್ತಿತರರು ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.