ಸುಳ್ಯ:ಸುಳ್ಯ ತಾಲೂಕು ಅರಣ್ಯ ಪ್ರದೇಶ ಹೆಚ್ಚಿರುವ ಭಾಗವಾಗಿರುವುದರಿಂದ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಗಳು ಹೆಚ್ಚಾಗುತ್ತವೆ. ಸೀಮಿತ ಸಿಬ್ಬಂದಿ ವ್ಯವಸ್ಥೆಯ ನಡುವೆಯೂ ಗ್ರಾಹಕರಿಗೆ ತ್ವರಿತ ಸ್ಪಂದನೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್ ನಾಯ್ಕ್ ಹೇಳಿದರು.ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ನಡೆದ
ಉಪವಿಭಾಗ ಮಟ್ಟದ ಗ್ರಾಹಕರ ಸಂವಹನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಒಂದು ಸಾವಿರದ ಇನ್ನೂರು ಚದರಡಿಗಿಂತ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ನಿರಾಪೇಕ್ಷಣ ಪತ್ರವಿಲ್ಲದೇ ವಿದ್ಯುತ್ ಸಂಪರ್ಕ ನೀಡಲು ಅವಕಾಶವಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಮಾತನಾಡಿದ ನವೀನ್ ಫೆರಾವೋ ಮಳೆಗಾಲಕ್ಕೂ ಮುನ್ನ ವಿದ್ಯುತ್ ಮಾರ್ಗದ ಪಕ್ಕದ ಮರಗಳ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬಾಸ್ ಎ.ಬಿ. ಮಾತನಾಡಿ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ವಿದ್ಯುತ್ ಲೈನ್ ಬದಿಯ ಮರಗಳ ಗೆಲ್ಲು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.ಅಜ್ಜಾವರ ಗ್ರಾಮದ ಅಶ್ರಫ್ ಸಅದಿ ಹಾಗೂ ಅಬ್ಬಾಸ್ ಎ.ಬಿ. ಮನವಿ ನೀಡಿ, ಅಡ್ಡಂಗಾಯ ವಾರ್ಡ್ ಮಂಡೆಕೋಲು-ಜಾಲ್ಕೂರು ವಿದ್ಯುತ್ ವಿಭಾಗಕ್ಕೆ ಒಳಪಟ್ಟಿರುವುದರಿಂದ ಮಂಡೆಕೋಲು ಭಾಗದಲ್ಲಿ ಸಮಸ್ಯೆ ಉಂಟಾದಾಗ ಅಡ್ಡಂಗಾಯ ಭಾಗದಲ್ಲಿಯೂ ವಿದ್ಯುತ್ ವ್ಯತ್ಯಯವಾಗುತ್ತಿದೆ. ಅಜ್ಜಾವರ ಗ್ರಾಮವನ್ನು ನಗರ ವಿಭಾಗಕ್ಕೆ ಸೇರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗಗಳಲ್ಲಿ ಲೈನ್ಮನ್ ಕೊರತೆ ಇರುವುದನ್ನು ಸಾರ್ವಜನಿಕರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್ ನಾಯ್ಕ್ ಒಂದೂವರೆ ತಿಂಗಳೊಳಗೆ ಹೊಸ ಲೈನ್ಮನ್ ನೇಮಕಾತಿ ನಡೆಯಲಿದೆ ಎಂದು ತಿಳಿಸಿದರು.
ಮೆಸ್ಕಾಂ ಸಲಹಾ ಸಮಿತಿ ಸದಸ್ಯ ನಂದರಾಜ್ ಸಂಕೇಶ್, ಬೆಟ್ಟಂಪಾಡಿ-ಶಾಂತಿನಗರ ಸಂಪರ್ಕ ರಸ್ತೆಯ ಕೆಲ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು, ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಮನವಿ ಮಾಡಿದರು.ವಿದ್ಯುತ್ ಸಮಸ್ಯೆ ಕುರಿತು ಕರೆ ಮಾಡಿದಾಗ ಕೆಲವೊಮ್ಮೆ ಸ್ಪಂದನೆ ಸಿಗುತ್ತಿಲ್ಲ ಎಂಬ ಅಹವಾಲು ವ್ಯಕ್ತಪಡಿಸಿದ ಅಶ್ರಫ್ ಸಅದಿ, ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ತ್ವರಿತ ಸ್ಪಂದನೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಸುಳ್ಯ ವಿಭಾಗದ ಜೆಇ ಸುಪ್ರೀತ್, ಬೆಳ್ಳಾರೆ ಜೆಇ ಪ್ರಸಾದ್, ಅರಂತೋಡು ಜೆಇ ಪರಶುರಾಮ, ಜಾಲ್ಕೂರು ಪ್ರಭಾರ ಜೆಇ ಜಯಪ್ರಕಾಶ್ ಉಪಸ್ಥಿತರಿದ್ದರು. ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಿಎಂ ಶಾರಿಕ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಝುಬೈರ್ ಸೇರಿದಂತೆ ಹಲವರು ಭಾಗವಹಿಸಿದ್ದರು.














