ಸುಳ್ಯ:ಸುಳ್ಯದ ವಿದ್ಯುತ್ ಸಮಸ್ಯೆ ನೀಗಿಸುವ ಉದ್ದೇಶದಿಂದ ಬೆಳ್ಳಾರೆಯಿಂದ ಸುಳ್ಯಕ್ಕೆ ವಿದ್ಯುತ್ ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಮಾಡಲಾಗಿದೆ. ಆದರೆ ಮಳೆ ಬಂದಾಗ ಸುಳ್ಯದಲ್ಲಿ ಎರಡು ದಿನ ವಿದ್ಯುತ್ ಇರುವುದಿಲ್ಲ. ನಗರ ಸೇರಿ ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲಿರುತ್ತದೆ ಎಂದು ಗ್ಯಾರೆಂಟಿ ಯೋಜನೆ ಸಮಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸುಳ್ಯ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ
ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸದಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಮೆಸ್ಕಾಂ ಎ.ಇ ಸುಪ್ರೀತ್ ಕುಮಾರ್ ಬೆಳ್ಳಾರೆಯಿಂದ ಸುಳ್ಯಕ್ಕೆ ಬಂದ ಅಂಡರ್ ಗ್ರೌಂಡ್ ಕೇಬಲ್ ವಿದ್ಯುತ್ ಸಂಪರ್ಕದಿಂದ ಕಾವುನಲ್ಲಿರುವ ಫೀಡರ್ಗೂ ಚಾರ್ಜ್ ಮಾಡಬೇಕಿದೆ. ಇದರಿಂದ ಸುಳ್ಯದ ನಗರಕ್ಕೆ ಮಾತ್ರ ವಿದ್ಯುತ್ ಸಂಪರ್ಕ ನೀಡಿ, ಗ್ರಾಮೀಣ ಭಾಗಗಳಿಗೆ ಸಂಪರ್ಕ ನೀಡಲು ಸಾಧ್ಯವಾಗಿಲ್ಲ ಎಂದರು.
ಮಳೆಗಾಲದಲ್ಲಿ ಸುಳ್ಯಕ್ಕೆ ವಿದ್ಯುತ್ ಸಮಸ್ಯೆ ಆಗಬಾರದು ಎಂದು ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿಕೊಳ್ಳಲಾಗಿದೆ. ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಬದಲು ಪುತ್ತೂರಿನ ಕಾವು ಭಾಗಕ್ಕೆ ಸಂಪರ್ಕ ನೀಡುವುದು ಯಾಕೆ ಎಂದು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್
ಭರತ್ ಮುಂಡೋಡಿ ಪ್ರಶ್ನಿಸಿದರು.
ವಿದ್ಯುತ್ ಲೈನ್ಗಳ ನಿರ್ವಹಣಾ ಕೆಲಸವನ್ನು ಮೆಸ್ಕಾಂ ಸಿಬ್ಬಂದಿಗಳ ಜತೆಗೂಡಿ ಆಯಾ ಭಾಗದ ಯುವಕ ಮಂಡಲಗಳ ಸದಸ್ಯರ ಜತೆಗೂಡಿ ಮಾಡಲು ಯುವಜನ ಸಂಯುಕ್ತ ಮಂಡಳಿ ಜತೆ ಜಂಟಿ ಸಭೆ ಮಾಡಿ ನಿರ್ಣಯಿಸುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಭರತ್ ಮುಂಡೋಡಿ ಹೇಳಿದರು. ಮೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಲೈನ್ಗಳ ನಿರ್ವಹಣಾ ಕೆಲಸಕ್ಕಾಗಿ ಗ್ಯಾಂಗ್ಮೆನ್ಗಳ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಮತ್ತು ಕೆಲಸಕ್ಕೆ ವೇಗ ನೀಡುವ ಉದ್ದೇಶದಿಂದ ತುರ್ತು ಕೆಲಸಕ್ಕಾಗಿ ಆಯಾ ಭಾಗದ ಯುವಕ ಮಂಡಲದ ಸದಸ್ಯರ ಸಹಕಾರ ಪಡೆದು ವಿದ್ಯುತ್ ಲೈನ್ಗಳ ಬಳಿ ಇರುವ ಮರದ ಗೆಲ್ಲುಗಳನ್ನು ಕಡಿದು ನಿರ್ವಹಣಾ ಕೆಲಸ ಮಾಡಿದರೆ ಹೆಚ್ಚು ಉತ್ತಮ. ಇದಕ್ಕಾಗಿ ಯುವಜನ ಸಂಯುಕ್ತ ಮಂಡಳಿ ಮತ್ತು ಮೆಸ್ಕಾಂ ಇಲಾಖೆಯ ಜಂಟಿ ಸಭೆ ಸಡೆಸಿ ತೀರ್ಮಾನ ಮಾಡಲಾಗುವುದು ಎಂದು ಭರತ್ ಮುಂಡೋಡಿ ಹೇಳಿದರು.
ಮೆಸ್ಕಾಂ ಅಧಿಕಾರಿಗಳ ಮೇಲೆ ಹಲವಾರು ಮಂದಿ ದೂರು ಸಲ್ಲಿಸುತ್ತಿದ್ದಾರೆ. ಕರೆ ಮಾಡಿದರೆ ಕರೆ ಸ್ವೀಕಾರ ಮಾಡುವುದಿಲ್ಲ. ಪ್ರತಿ ಇಲಾಖೆಗೆ ಸರಕಾರಿ ಸಿಮ್ ವಿತರಣೆ ಮಾಡಲಾಗಿದೆ. ಕರೆ ಸ್ವೀಕಾರ ಮಾಡದಿದ್ದರೆ ಮೊಬೈಲ್ನಲ್ಲಿ ಫೋನ್ ಮಾಡಿದರೆ ಸ್ಕ್ರೀನ್ ಶಾಟ್ ತೆಗೆದು ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ.ಅಸಹಕಾರ ತೋರಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ನೇರವಾಗಿ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ಭರತ್ ಮುಂಡೋಡಿ ಎಚ್ಚರಿಸಿದರು.
ಸುಳ್ಯ ತಾಲೂಕಿನಲ್ಲಿ ೨೬೪೭೮ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿದೆ. ಇನ್ನೂ ಕೂಡ ೨೦೫೮ ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಲು ಬಾಕಿ ಇದ್ದಾರೆ. ಇದರಲ್ಲಿ ೫೫೫ ಮಂದಿ ಐಟಿ ಮತ್ತು ಜಿಎಸ್ಟಿ ಪಾವತಿ ಮಾಡುತ್ತಾರೆ ಹೊಸದಾಗಿ ೨೨ ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಇನ್ನೂ ೧೫೦೦ ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿಲ್ಲ ಎಂದು ಸಿಡಿಪಿಒ ಇಲಾಖೆಯ ಅಧಿಕಾರಿ ತಿಳಿಸಿದರು.
ಯೋಜನೆ ಆರಂಭವಾಗಿ ೨ ವರ್ಷ ಕಳೆದರೂ ತಾಲೂಕಿನಲ್ಲಿ ಇನ್ನೂ ೧೫೦೦ ಮಂದಿಯನ್ನು ಗುರುತಿಸುವ ಕೆಲಸ ಮಾಡಿಲ್ಲ. ಅರ್ಹ ಫಲಾನುಭವಿಗಳನ್ನು ಯೋಜನೆಗೆ ಸೇರಿಸುವ ಕೆಲಸ ಕೂಡಲೇ ಮಾಡಬೇಕು. ಬಾಕಿಯಾದ ೧೫೦೦ ಫಲಾನುಭವಿಗಳ ಪಟ್ಟಿಯನ್ನು ಆಯಾ ಭಾಗದ ಗ್ಯಾರೆಂಟಿ ಸಮಿತಿಗಳ ಸದಸ್ಯರಿಗೆ, ಪಡಿತರ ಕೇಂದ್ರಗಳಿಗೆ ನೀಡಿ ಅವರನ್ನು ಗುರುತಿಸುವ ಕೆಲಸ ಮಾಡಿ ಎಂದು ಭರತ್ ಮುಂಡೋಡಿ ಹೇಳಿದರು.
ಸಭೆಯಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಾ.ಪಂ. ಇಒ ರಾಜಣ್ಣ, ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಅಬ್ಬಾಸ್ ಅಜ್ಜಾವರ, ಈಶ್ವರ ಆಳ್ವ, ಧನುಶ್ ಕುಕ್ಕೆಟ್ಟಿ, ರವಿ ಗುಂಡಡ್ಕ, ವಿಜೇಶ್ ಹಿರಿಯಡ್ಕ, ಸೋಮಶೇಖರ ಕೇವಳ, ಇಬ್ರಾಹಿಂ ಶಿಲ್ಪ, ಜ್ಞಾನಶೀಲನ್, ಲತೀಫ್ ಅಡ್ಕಾರ್, ಇಲಾಖೆಯ ಅಧಿಕಾರಿಗಳು ಇದ್ದರು.














