ಸುಳ್ಯ:ಎಲ್ಲಾ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಸುಳ್ಯ ತಹಸೀಲ್ದಾರ್ ಎಂ. ಮಂಜುಳಾ ಹೇಳಿದರು.ಸುಳ್ಯ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಸುಳ್ಯ ತಾಲೂಕು ಮಟ್ಟದ ಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರಕಾರಿ ಶಾಲೆಯಲ್ಲಿ
ದಾಖಲಾತಿ ಹೆಚ್ಚಿಸುವ ಜತೆಗೆ ಯಾವ ಮಗುವೂ ಶಿಕ್ಷಣದಿಂದ ಹೊರಗುಳಿಯಬಾರದು, ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಅಲ್ಲದೇ ಉತ್ತಮವಾದ ಸೌಕರ್ಯಗಳನ್ನು ಹೊಂದಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ‘ಸರಕಾರಿ ಶಾಲೆಗಳಲ್ಲಿ ಎಲ್ಲಾ ಶಿಕ್ಷಕರುಗಳು ಉತ್ತಮ ವಿದ್ಯಾ ಅರ್ಹತೆ ಉಳ್ಳವರಾಗಿದ್ದು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಲಭಿಸಲು ಕಾರಣವಾಗುತ್ತಿದೆ. ಆದ್ದರಿಂದ ಎಲ್ಲಾ ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಯು ಕೆ ಶೀತಲ್ ಪ್ರಸ್ತಾವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಸ್ ಹರಗಿ ಸ್ವಾಗತಿಸಿ ದಾಖಲಾತಿ ಅಭಿಯಾನದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಿಕ್ಷಣ ಸಂಯೋಜಕಿ ಧನಲಕ್ಷ್ಮೀ ಕುದ್ಪಾಜೆ, ಮಮತಾ ಪಡ್ಡಂಬೈಲು, ದೈಹಿಕ ಶಿಕ್ಷಣ ಶಿಕ್ಷನ ಯೂಸೂಫ್, ಗ್ಯಾರಂಟೆ ಅನಿಷ್ಠಾನ ಸಮಿತಿ ಸದಸ್ಯರು, ಶಿಕ್ಷಕರು, ಹಾಗೂ ಸಮಿತಿಯ ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು, ಶಿಕ್ಷಣ ಕಚೇರಿಯ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕರುಗಳಾದ ಉದಯ ವಂದಿಸಿದರು. ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಂದೋಲನ ಜಾಥಾ ತಾಲೂಕು ಪಂಚಾಯಿತಿ ವಠಾರದಿಂದ ಸರಕಾರಿ ಪದವಿ ಪೂರ್ವ ಕಾಲೇಜುವರೆಗೆ ನಡೆಯಿತು. ಬಳಿಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದಾಖಲಾತಿ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ದಾಖಲಾತಿ ಪತ್ರವನ್ನು ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು.














