ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಬೆಳಿಗ್ಗಿನಿಂದ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನದ ವೇಳೆಗೆ ಮತ್ತು ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿದೆ.ಸುಳ್ಯ, ಪುತ್ತೂರು ಸೇರಿದಂತೆ ದ.ಕ.ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿದಿದ್ದು ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದೆ. ಬಿಸಿಲಿನ ಬೇಗೆಗೆ ಮತ್ತು
ಏರಿದ ಉಷ್ಣಾಂಶದಿಂದ ಬಸವಳಿದಿರುವ ಇಳೆಗೆ ವರುಣ ತಂಪೆರೆದಿದೆ. ಕಳೆದ ಒಂದು ವಾರದಿಂದ ಜಿಲ್ಲಡಯ ವಿವಿಧ ಕಡೆಗಳಲ್ಲಿ ಮಳೆಯಾಗುತಿದೆ.ಇದೀಗ ಮಳೆ ಬಿರುಸುಗೊಂಡಿದ್ದು
ಸುಳ್ಯ ನಗರದಲ್ಲಿ ಉತ್ತಮ ಮಳೆಯಾಗಿದೆ. ಗುಡುಗು, ಸಿಡಿಲು ಹಾಗು ಗಾಳಿಯ ಅಬ್ಬರದೊಂದಿಗೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾದರೆ ಕೆಲವೆಡೆ ಉತ್ತಮ ಮಳೆಯಾಗಿದೆ.
ಸುಳ್ಯ ನಗರದಲ್ಲಿ ಇಂದು 74 ಮಿ.ಮಿ.ಮಳೆಯಾಗಿದೆ(7.4 ಸೆ.ಮೀ) ಎಂದು ಸುಳ್ಯ ನಗರದಲ್ಲಿ ಪ್ರತಿ ದಿನದ ಮಳೆಯನ್ನು ಅಳತೆ ಮಾಡಿ ದಾಖಲಿಸುವ ಶ್ರೀಧರ ರಾವ್ ಹೈದಂಗೂರು ಮಾಹಿತಿ ನೀಡಿದ್ದಾರೆ.
ಮುಂದಿನ ಕೆಲವು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಧ್ಯೆ ನೈರುತ್ಯ ಮುಂಗಾರು ಮೇ.26ರಂದು ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಮುಂಗಾರು ಮೇ.24ರಂದು ಕೇರಳ ತೀರ ಪ್ರವೇಶಿಸಿತ್ತು. ಈ ಮಧ್ಯೆ ನೈರುತ್ಯ ಮುಂಗಾರು ಮಾರುತ ಅಂಡಮಾನ್ ನಿಕೋಬಾರ್, ದಕ್ಷಿಣ ಶ್ರೀಲಂಕಾ ಪ್ರವೇಶಿಸಿದ್ದು ಸೂಚನೆಯಂತೆ ಮುಂಗಾರು ಕೇರಳ ತೀರ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮಳೆ ದಾಖಲೆಗಾರರು ಹಾಗು ಹವಾಮಾನ ವಿಶ್ಲೇಷಕರಾದ ಬಾಳಿಲದ ಪಿಜಿಎಸ್ಎನ್.ಪ್ರಸಾದ್ ಹೇಳುತ್ತಾರೆ.














