ಸಂಪಾಜೆ: ಸಂಪಾಜೆ ಗ್ರಾಮದ ವಿವಿಧ ಭಾಗಗಳಲ್ಲಿ 3 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮ ಕತ್ತಲಲ್ಲಿ ಕಳೆಯುವಂತಾಗಿದೆ. ಗ್ರಾಮಕ್ಕೆ ಕತ್ತಲು ಭಾಗ್ಯ ಕರುಣಿಸಿದ ವಿಚಾರವನ್ನು ಇದೀಗ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ
ಪ್ರಶ್ನೆ ಎತ್ತಿ ಸರಕಾರದ, ಸಚಿವರ ಸಚಿವರ ಗಮನಕ್ಕೆ ತನ್ನಿ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಒತ್ತಾಯಿಸಿದ್ದಾರೆ. ವಿಧಾನ ಮಂಡಲದಲ್ಲಿ ಪ್ರಶ್ನೆ ಎತ್ತುವುದರ ಜೊತೆಗೆ ಸಮಸ್ಯೆಯ ಬಗ್ಗೆ ಈ ಭಾಗದ ಮುಖಂಡರು ಜಿಲ್ಲೆಯವರೇ ಆದ ಸ್ಪೀಕರ್ ಅವರಿಗೆ ವಿಷಯ ತಿಳಿಸಿ, ಇಂಧನ ಸಚಿವರ ಗಮನಕ್ಕೆ ತನ್ನಿ ಎಂದು ಸಾಮಾಜಿಕ ಕಾರ್ಯಕರ್ತರಾದ ವಿಜಯ ಆಲಡ್ಕ ಆಗ್ರಹಿಸಿದ್ದಾರೆ.
ದೊಂದಿ ಮೆರವಣಿಗೆ ಮಾಡುವ ಮೂಲಕ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಬೇಕು, ಕತ್ತಲಿನಿಂದ ಪಾರಾಗಲು
ಮತ್ತೆ ಸಹಕಾರ ಸಂಘಗಳ ಮೂಲಕ ಸೀಮೆ ಎಣ್ಣೆ ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆಗಾಲ ಕಳೆಯಲು ಪ್ರತಿಯೊಂದು ಮನೆಗೆ ಸೀಮೆ ಎಣ್ಣೆ ಲ್ಯಾಟಿನ್ ದೀಪ ನೀಡುವ ಕೆಲಸ ಸರಕಾರ ಮಾಡಬೇಕು ಎಂದು ಸಾರ್ವಜನಿಕರು ಬೇಡಿಕೆ ಇರಿಸಿದ್ದಾರೆ. ಒಟ್ಟಿನಲ್ಲಿ ಕಳೆದ 3 ದಿನಗಳಿಂದ ವಿದ್ಯುತ್ ಕಡಿತ ಆಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.