ಸುಳ್ಯ: ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಸುಳ್ಯದ ವಿದ್ಯುತ್ ಸಮಸ್ಯೆಯೂ ಅತಿ ತೀವ್ರಗೊಂಡಿದೆ. ಸೋಮವಾರ ಸಂಜೆಯ ವೇಳೆಗೆ ಮಾಯವಾದ ಕರೆಂಟ್ ರಾತ್ರಿ 11 ಗಂಟೆಯಾದರೂ ಬಂದಿಲ್ಲ. ಪರಿಣಾಮ ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಕತ್ತಲು ಆವರಿಸಿದೆ. ಮಳೆ ತೀವ್ರಗೊಂಡಿರುವ ಸಂದರ್ಭದಲ್ಲಿ ಕರೆಂಟ್ ಕೂಡ ಇಲ್ಲದೆ ಜನತೆ ಕತ್ತಲಲ್ಲಿ
ಕಳೆಯುವ ಪರಿಸ್ಥಿತಿ ಉಂಟಾಗಿದೆ. ಮಳೆಗಾಲ ಆರಂಭಗೊಂಡ ಬಳಿಕ ಸರಿ ಸುಮಾರು ಎರಡು ತಿಂಗಳಿಂದ ಸುಳ್ಯದ ಜನತೆಗೆ ಕತ್ತಲ ಭಾಗ್ಯ ತಪ್ಪುತ್ತಿಲ್ಲ. ದಿನಗಟ್ಟಲೆ, ಗಂಟೆಗಟ್ಟಲೆ ನಿರಂತರ ವಿದ್ಯುತ್ ಕಡಿತ ಇಲ್ಲಿ ಮಾಮೂಲಿಯಾಗಿದೆ. ಭಾನುವಾರ ಹಗಲು ದಿನಪೂರ್ತಿ ಕರೆಂಟ್ ಇರಲಿಲ್ಲ. ರಾತ್ರಿಯ ವೇಳೆ ಬಂದರೂ ಕೆಲವು ಲೈನ್ಗಳಲ್ಲಿ ಸರಬರಾಜು ಸರಿಯಾಗಿರಲಿಲ್ಲ. ಸೋಮವಾರ ಹಗಲಿನ ವೇಳೆಯೂ ಸಮರ್ಪಕವಾಗಿ
ಕರೆಂಟ್ ಇರಲಿಲ್ಲ. ಕರೆಂಟ್ ಇದ್ದರೂ ಹಲವು ಬಾರಿ ಕಡಿತಗೊಳ್ಳುತ್ತಿತ್ತು. ಸಂಜೆಯ ವೇಳೆಗೆ ಹೋದ ಕರೆಂಟ್ ತಡ ರಾತ್ರಿಯೂ ಬಂದಿಲ್ಲ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ. ಅಜ್ಜಾವರ ಮತ್ತಿತರ ಹಲವು ಗ್ರಾಮಗಳಲ್ಲಿ ಹಲವು ದಿನಗಳಿಂದ ಜನತೆಗೆ ಕತ್ತಲು ಭಾಗ್ಯ. ಆನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿ ತೀವ್ರಗೊಂಡಿರುವ ಕಾರಣ ಭೀತಿಯಲ್ಲಿರುವ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಜಬರಿಗೆ ವಿದ್ಯುತ್ ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.