ಸಂಪಾಜೆ: ಐಸಿಎಆರ್- ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ವತಿಯಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಕರ್ನಾಟಕದಲ್ಲಿ ರೈತರ ಕೃಷಿ ಜೀವನೋಪಾಯವನ್ನು ವೃದ್ಧಿಸಲು ಆರ್.ಕೆ.ವಿ.ವೈ- ರಾಫ್ತಾರ್, ಅನುದಾನಿತ ಯೋಜನೆಯಡಿಯಲ್ಲಿ, ಗೇರು ಬೆಳೆಯ ಮಾದರಿ ಗ್ರಾಮ ಅಭಿವೃದ್ಧಿಪಡಿಸಲು ಸಂಪಾಜೆ ಗ್ರಾಮವನ್ನು ಸಂಸ್ಥೆಯು ದತ್ತು ಪಡೆದಿದೆ.ಗೇರು ಬೆಳೆಯಲ್ಲಿ ಮೇಲಾವರಣ (ಸವರುವಿಕೆ ಮತ್ತು
ಆಕಾರ ಕೊಡುವಿಕೆ)ದ ನಿರ್ವಹಣೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್. ಪಿ., ವಿಜ್ಞಾನಿ (ತೋಟಗಾರಿಕೆ), ಡಾ. ಭಾಗ್ಯ, ಹಿರಿಯ ವಿಜ್ಞಾನಿ (ತೋಟಗಾರಿಕೆ), ಡಾ.ವಿ. ಥೊಂಡೈಮನ್,ವಿಜ್ಞಾನಿ (ಕೃಷಿ ವಿಸ್ತರಣೆ) ಡಾ. ಅಶ್ವತಿ ಚಂದ್ರಕುಮಾರ್, ಮತ್ತು ವಿಜ್ಞಾನಿ (ಆಹಾರ ತಂತ್ರಜ್ಞಾನ)
ಡಾ. ಜ್ಯೋತಿ ನಿಶಾದ್ ಅವರನ್ನೊಳಗೊಂಡ ವಿಜ್ಞಾನಿಗಳ ತಂಡ ಗೇರು ತೋಟದಲ್ಲಿ ರೈತರ ಅನುಕೂಲಕ್ಕಾಗಿ ಸವರುವಿಕೆ ಮತ್ತು ಆಕಾರ ಕೊಡುವಿಕೆಯನ್ನು ಪ್ರದರ್ಶಿಸಿದರು. ಗೇರು ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಲು ಮತ್ತು ಆ ಮೂಲಕ ಬೆಳೆಯ ಲಾಭದಾಯಕತೆ ಹೆಚ್ಚಿಸಲು ಮೇಲಾವರಣ ನಿರ್ವಹಣೆ ಬಹಳ ಮುಖ್ಯ. ಮರದ ಮೇಲಾವರಣ
ಸಮರ್ಪಕ ನಿರ್ವಹಣೆಯು ಮರದ ಬೆಳವಣಿಗೆ ಮತ್ತು ಉತ್ಪಾದನೆಯಲ್ಲಿ ಸಮತೋಲನವನ್ನು ಸಾಧಿಸಲು ನೆರವಾಗುತ್ತದೆ. ಸರಿಯಾದ ರೀತಿಯಲ್ಲಿ ಗೇರು ಬೆಳೆಗೆ ಮೊದಲ ವರ್ಷದಿಂದಲೇ ಆಕಾರ ನೀಡಿದರೆ ಮರದ ಪಾತಿಯಲ್ಲಿ ಇತರ ಕೃಷಿ ಚಟುವಟಿಕೆಗಳಾದ ಕಳೆ ನಿರ್ವಹಣೆ, ಗೊಬ್ಬರ ಹಾಕುವಿಕೆ, ಔಷಧ ಸಿಂಪರಣೆ ಮತ್ತು ಹಣ್ಣು ಹೆಕ್ಕುವ ಕಾರ್ಯಗಳಿಗೆ ಅನುಕೂಲಕರವಾಗಿರುತ್ತದೆ. ಗೇರು ಬೆಳೆಯಲ್ಲಿ ಸವರುವಿಕೆಯನ್ನು ಮೇಯಿಂದ ಜೂನ್ ತಿಂಗಳುಗಳಲ್ಲಿ ಮಳೆ ಕಡಿಮೆ ಇರುವ ಸಮಯದಲ್ಲಿ ಮಾಡುವುದು ಸೂಕ್ತ. ಸವರುವಿಕೆಯ ನಂತರ ಕತ್ತರಿಸಿದ ಭಾಗಕ್ಕೆ ದಪ್ಪ ಕಾಂಡವಿದ್ದರೆ ಶೇಕಡ 10ರ ಬೋರ್ಡೋ ದ್ರಾವಣ ಲೇಪನಮಾಡಬೇಕು, ಸಣ್ಣ ಕೊಂಬೆಗಳಾದರೆ ಶೇಕಡ 1 ರ ಬೋರ್ಡೋ ದ್ರಾವಣವನ್ನು ಸಿಂಪರಣೆ ಮಾಡಬೇಕು. ಸವರುವಿಕೆಯ ಕಾರ್ಯವನ್ನು ಸಾಮಾನ್ಯ ಪದ್ದತಿಯಲ್ಲಿ ನಾಟಿ ಮಾಡಿದ್ದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಮಾಡಬಹುದು, ಘನಸಂದ್ರ ಹಾಗು ಅತಿ ಘನಸಂದ್ರ ಪದ್ದತಿಯಲ್ಲಾದರೆ ಪ್ರತಿ ವರ್ಷ ಕೊಯ್ಲಿನ ನಂತರ ಮಾಡಬೇಕಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್, ಮಾಜಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸಿಲ್ವೆಸ್ಟರ್ ಡಿ ಸೋಜಾ, ಪುಷ್ಪರಾಜ್ ಗಾಂಭೀರ್ ಮತ್ತಿತರರು ಉಪಸ್ಥಿತರಿದ್ದರು.