ಮಂಗಳೂರು: ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ನಗರದ ಪ್ರೆಸ್ಕ್ಲಬ್ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್ರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ವರದಿಯನ್ನು
ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯ. ಬಾಯಿಗೆ ಬಂದದ್ದನ್ನು ಹೇಳಿ ಬಿಟ್ಟು ಅದರಿಂದ ಇನ್ನೊಂದು ಅನ್ಯಾಯ ಆಗಲು ಅವಕಾಶ ನೀಡುವ ಬದಲು ಬರೆಯುವ ಸುದ್ದಿಯ ನಿಖರತೆ ಮುಖ್ಯವಾಗಿರುತ್ತದೆ. ಯಾವುದೇ ಸಮಸ್ಯೆಗಳ ಸಂದರ್ಭ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಿಂತಲೂ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು. ಸತ್ಯ ಬರೆಯುವಾಗ ಯಾವುದೇ ರೀತಿಯ ಯಾವುದೇ ಭಯ ಬೇಡ.ಜಾಗೃತ ವರದಿಗಾರಿಕೆ, ಹೃದಯವಂತಿಕೆಯ ಪತ್ರಿಕೋದ್ಯಮ ನಮ್ಮ ಅಗತ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್ನ ಅಧ್ಯಕ್ಷ ರಾಮಕೃಷ್ಣ ಆರ್. ಮಾಜಿ ಅಧ್ಯಕ್ಷ ಆನಂದ ಶೆಟ್ಟಿ,ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.