ಬೆಂಗಳೂರು:ದಕ್ಷಿಣ ಭಾರತದ ಗಾನಕೋಗಿಲೆ, ಖ್ಯಾತ ಗಾಯಕಿ ಎಸ್. ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 88 ವರ್ಷ ವಯಸ್ಸಾಗಿತ್ತು. 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿ, ಆರು ದಶಕಗಳ ಕಾಲ ಸಂಗೀತ ಲೋಕವನ್ನು ಆಳಿದ್ದರು.1938ರ ಏಪ್ರಿಲ್ 23 ರಂದು
ಜನಿಸಿದ ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ ಅವರು ಸಂಗೀತ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಧ್ವನಿಯಾಗಿದ್ದರು. ಹಾಡಿನ ಪ್ರತಿ ಸಾಲಿಗೂ ಜೀವ ತುಂಬುತ್ತಿದ್ದ ಇವರ ವಿಶಿಷ್ಟ ಶೈಲಿಗೆ ಜಗತ್ತೇ ಮಾರುಹೋಗಿತ್ತು. ಅದಕ್ಕಾಗಿಯೇ ಇವರನ್ನು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಪ್ರೀತಿಯಿಂದ “ಜಾನಕಿ ಅಮ್ಮ” ಮತ್ತು “ದಕ್ಷಿಣ ಭಾರತದ ಗಾನಕೋಗಿಲೆ” ಎಂದೇ ಆರಾಧಿಸುತ್ತಿದ್ದರು.
ಎಸ್.ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಹೆಚ್ಚು ಹಾಡುಗಳನ್ನು ಹಾಡಿದ್ದರು. 1960, 1970 ಮತ್ತು 1980 ರ ದಶಕಗಳಲ್ಲಿ ಡಾ.ಕೆ.ಜೆ.ಯೇಸುದಾಸ್, ಪಿ.ಬಿ. ಶ್ರೀನಿವಾಸ್ , ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಡಾ. ರಾಜ್ಕುಮಾರ್ ಜೊತೆಗೆ ಹಲವು ಹಾಡುಗಳನ್ನು ಹಾಡಿದ್ದಾರೆ.
ಜಾನಕಿ ಅಮ್ಮನವರ ಕಂಠಸಿರಿಗೆ ಭಾಷೆಯ ಗೆರೆಗಳಿರಲಿಲ್ಲ. ಚಿತ್ರಗಳು, ಆಲ್ಬಮ್ಗಳು, ದೂರದರ್ಶನ ಮತ್ತು ರೇಡಿಯೋ ಸೇರಿದಂತೆ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೊಬ್ಬರಿ 48,000ಕ್ಕೂ ಹೆಚ್ಚು ಹಾಡುಗಳನ್ನು ಅವರು ರೆಕಾರ್ಡ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಡಗ, ಬೆಂಗಾಲಿ, ಕೊಂಕಣಿ ಸೇರಿದಂತೆ ಭಾರತದ 20 ಭಾಷೆಗಳಲ್ಲಿ ಇವರ ಸ್ವರ ಸಾರಥ್ಯವಿತ್ತು. ಅಷ್ಟೇ ಅಲ್ಲದೆ, ಇಂಗ್ಲಿಷ್, ಜಪಾನೀಸ್, ಜರ್ಮನ್ ಮತ್ತು ಸಿಂಹಳದಂತಹ ವಿದೇಶಿ ಭಾಷೆಗಳಿಗೂ ತಮ್ಮ ಧ್ವನಿಯಾಗುವ ಮೂಲಕ ಭಾರತದ ಅತ್ಯಂತ ಬಹುಮುಖ ಪ್ರತಿಭೆಯ ಗಾಯಕಿ ಎನಿಸಿಕೊಂಡಿದ್ದರು.
ಲ19ನೇ ವಯಸ್ಸಿಗೆ ಆರಂಭವಾದ ಸಂಗೀತ ಸವಾರಿ
1957 ರಲ್ಲಿ ತಮಿಳಿನ ‘ವಿಧಿಹಿನ್ ವಿಲಾಯಟ್ಟು’ ಚಿತ್ರದ ಮೂಲಕ ಕೇವಲ 19ನೇ ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯಕಿಯಾಗಿ ಜಾನಕಿ ಅಮ್ಮ ಚಿತ್ರರಂಗ ಪ್ರವೇಶಿಸಿದರು. ಅಚ್ಚರಿಯೆಂದರೆ, ಅವರು ವೃತ್ತಿಜೀವನ ಆರಂಭಿಸಿದ ಮೊದಲ ವರ್ಷದಲ್ಲೇ ಆರು ವಿಭಿನ್ನ ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದರು. 2016 ರಲ್ಲಿ ಚಿತ್ರರಂಗ ಮತ್ತು ವೇದಿಕೆ ಕಾರ್ಯಕ್ರಮಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುವವರೆಗೆ ಸತತ 60 ವರ್ಷಗಳ ಕಾಲ ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ತದನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು 2018 ರ ತಮಿಳಿನ ‘ಪನ್ನಾಡಿ’ ಚಿತ್ರಕ್ಕಾಗಿ ಮತ್ತೊಮ್ಮೆ ಹಾಡಿದ್ದರು.
4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳು ಇವರ ಮುಡಿಗೇರಿವೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಮತ್ತು ಕರ್ನಾಟಕ ಸರ್ಕಾರದ ಅತ್ಯುನ್ನತ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಇವರನ್ನು ಗೌರವಿಸಲಾಗಿತ್ತು.





