ಲಕ್ನೋ: ಮುಂಬೈನ ಯುವ ಬ್ಯಾಟರ್ ಮುಶೀರ್ ಖಾನ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮುಶೀರ್ ಖಾನ್ ಅವರು ತಂದೆ ನೌಶಾದ್ ಖಾನ್ ಅವರೊಂದಿಗೆ ಅಜಂಗಢದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತ ನಡೆದಿದೆ ಎಂದು ವರದಿಯಾಗಿದೆ.
19 ವರ್ಷ ವಯಸ್ಸಿನ ಬ್ಯಾಟರ್ ಮುಶೀರ್ ಗಾಯದ ತೀವ್ರತೆ ಮತ್ತು
ಚೇತರಿಕೆಯ ಪ್ರಕ್ರಿಯೆಯ ಆಧಾರದ ಮೇಲೆ ಆರು ವಾರಗಳಿಂದ ಮೂರು ತಿಂಗಳವರೆಗೆ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ. ಕಳೆದೊಂದು ವರ್ಷದಿಂದ ದೇಶಿ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಮುಶೀರ್ಗೆ ಈ ಗಾಯ ದೊಡ್ಡ ಹಿನ್ನಡೆಯಾಗಿದೆ.
ಭಾರತ ತಂಡದ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ಅವರು ಕೆಂಪು-ಬಾಲ್ ಕ್ರಿಕೆಟ್ ನಲ್ಲಿ ಆಕರ್ಷಕ ಫಾರ್ಮ್ ನಲ್ಲಿದ್ದಾರೆ. ಇತ್ತೀಚಿಗೆ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಪರವಾಗಿ ಭಾರತ ಎ ವಿರುದ್ದ ಮುಶೀರ್ ಖಾನ್ 181 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 51.14 ರ ಪ್ರಭಾವಿ ಸರಾಸರಿಯೊಂದಿಗೆ ಮುಶೀರ್ 15 ಇನ್ನಿಂಗ್ಸ್ ಗಳಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 716 ರನ್ ಗಳಿಸಿದ್ದಾರೆ.
ಮುಶೀರ್ ಖಾನ್ ಅಪಘಾತದ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಕೆಲವೇ ದಿನಗಳಲ್ಲಿ ಇರಾನಿ ಕಪ್ ಆರಂಭವಾಗಲಿದೆ. ಇದರಲ್ಲಿ ಮುಂಬೈ ತಂಡದಲ್ಲಿ ಮುಶೀರ್ ಆಡಬೇಕಿತ್ತು. ಆದರೆ ಅಪಘಾತದಿಂದ ಅವರು ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ.