ವಿಟ್ಲ:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯನ್ನು ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದ್ದಾರೆ. ಅವರು ಬುಧವಾರ ರೇಷ್ಮೆ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಟ್ಲದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು.30 ವರ್ಷಗಳ ಹಿಂದಿನವರೆಗೂ ಕರಾವಳಿ ಜಿಲ್ಲೆಗಳಲ್ಲಿ
ರೇಷ್ಮೆ ಕೃಷಿ ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ಪ್ರಸ್ತುತ ಈ ಭಾಗದಲ್ಲಿ ಅಡಿಕೆ ಬೆಳೆ ಕಡಿಮೆಯಾಗುತ್ತಿರುವುದರಿಂದ ಪರ್ಯಾಯವಾಗಿ ರೇಷ್ಮೆ ಬೆಳೆಗೆ ಒತ್ತು ನೀಡಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರಿಗೆ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡಲು ಮುಂದೆ ಬರುವವರಿಗೆ ಎಲ್ಲಾ ತಾಂತ್ರಿಕ ನೆರವು ಕೂಡ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ ಬಿ. ಆರ್, ಹಿರಿಯ ಪತ್ರಕರ್ತ ಡಾ.ಯು.ಪಿ ಶಿವಾನಂದ, ಜಿಲ್ಲಾ ರೈತರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಶೆಟ್ಟಿ, ಪಶುಸಂಗೋಪನೆ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರೀತಮ್ ಸೀಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸಲಾಯಿತು. ಹಾಗೂ ಬೆಳೆಗಾರರಿಗೆ ಸಬ್ಸಿಡಿ ಮತ್ತು ಸಲಕರಣೆಗಳನ್ನು ವಿತರಿಸಲಾಯಿತು.













