ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ರಾತ್ರಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಕಿರೀಟ ಧರಿಸುತ್ತಿದ್ದಂತೆಯೇ ದೇಶದೆಲ್ಲೆಡೆ ಅಭಿಮಾನಿಗಳ ಸಂಭ್ರಮ ಉಕ್ಕಿ ಹರಿಯಿತು. ಹದಿನೆಂಟು ವರ್ಷಗಳಿಂದ ಈ ಕ್ಷಣಕ್ಕಾಗಿ ಕಾದಿದ್ದ ಲಕ್ಷಾಂತರ ಜನರು
ಬೀದಿಗಿಳಿದು ಸಂಭ್ರಮಿಸಿದರು. ಕುಣಿದರು, ಸಿಹಿ ಹಂಚಿದರು. ಬೆಳಗಿನ ಜಾವದವರೆಗೂ ‘ಆರ್ಸಿಬಿ..ಆರ್ಸಿಬಿ..‘ ಎಂಬ ಕೂಗುಗಳು ಪ್ರತಿಧ್ವನಿಸಿದವು.ಮೂರು ಸಲ ಫೈನಲ್ ತಲುಪಿದ್ದ ಆರ್ಸಿಬಿಗೆ ಪ್ರಶಸ್ತಿ ಒಲಿದಿರಲಿಲ್ಲ. ಆದರೆ ಈ ಸಲ ಕೈತಪ್ಪಲಿಲ್ಲ. ಈ ಸಲ ಕಪ್ ನಮ್ದೇ ಎಂದು ಗೆಲುವಿನ ಸಂಭ್ರಮದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಸೋಲಿಸಿದ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಿತು.
ಕೊಹ್ಲಿ ಭಾವುಕ ಮಾತು:
ಮೈದಾನದಲ್ಲಿ ಆನಂದಬಾಷ್ಟ ಸುರಿಸಿದ ವಿರಾಟ್ ಕೊಹ್ಲಿ ಮಾತನಾಡಿ‘ಅಭಿಮಾನಿಗಳ ಗೆಲುವು’
‘ಇದು ತಂಡಕ್ಕೆ ದಕ್ಕಿದ ಗೆಲುವು ಮಾತ್ರವಲ್ಲ, ಆರ್ಸಿಬಿ ಅಭಿಮಾನಿಗಳ ಗೆಲುವು ಕೂಡ. ಇದು 18 ದೀರ್ಘ ವರ್ಷಗಳ ಕಾಯುವಿಕೆ. ಈ ಅವಧಿಯಲ್ಲಿ ನನ್ನ ಯೌವನ, ಮೇರು ಮಟ್ಟದ ಆಟ, ಅನುಭವ ಧಾರೆ ಎರೆದಿದ್ದೇನೆ. ಪ್ರತಿ ವರ್ಷ ಗೆಲುವಿಗೆ ನನ್ನಿಂದ ಏನೆಲ್ಲಾ ಸಾಧ್ಯವೊ ಎಲ್ಲವನ್ನೂ ಕೊಟ್ಟಿದ್ದೇನೆ. ಕೊನೆಗೂ ಗೆದ್ದಿರುವುದು ನಂಬಲಸಾಧ್ಯವಾದ ಅನುಭವ. ಇದು ನಮ್ಮ ಗೆಲುವು ಮಾತ್ರವಲ್ಲ. ನಿಮ್ಮದೂ ಸಹ. ನಮ್ಮ ಜೊತೆ ಆಡಿದ ಎಲ್ಲರ, ಬೆಂಬಲಿಸಿದ ಅಭಿಮಾನಿಗಳ ಗೆಲುವು, ನನ್ನ ಹೃದಯ ಬೆಂಗಳೂರು, ನನ್ನ ಆತ್ಮ ಬೆಂಗಳೂರು ಎಂದು ಕೊಹ್ಲಿ ಭಾವುಕರಾಗಿ ನುಡಿದರು