ಅಹಮದಾಬಾದ್: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಕಪ್ಗಾಗಿ ಆರ್ಸಿಬಿಯ 18 ವರ್ಷದ ಕಾಯುವಿಕೆಗೆ ತರೆ ಕೊನಡಗೂ ಬಿದ್ದಿದೆ. ಕೋಟ್ಯಾಂತರ ಅಭಿಮಾನಿಗಳ ಮುಗಿಲು ಮುಟ್ಟಿದ ಸಂಭ್ರಮದ ನಡುವೆ ರಜತ್ ಪಾಟಿದಾರ್ ಬಳಗ ಪ್ರಥಮ ಬಾರಿಗೆ ಪ್ರಶಸ್ತಿ ಜಯಿಸಿ ನೂತನ
ದಾಖಲೆ ನಿರ್ಮಿಸಿದೆ.ಅಹಮ್ಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳ ಅಂತರದಲ್ಲಿ ಪರಾಭವಗೊಳಿಸಿ ಆರ್ಸಿಬಿ ಮೊದಲ ಬಾರಿಗೆ ಕಪ್ ಎತ್ತಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ ಒಂಬತ್ತು ವಿಕೆಟ್ 190 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಚಾಂಪಿಯನ್ ಆಗುವ ಪಂಜಾಬ್ ಕನಸು ನುಚ್ಚು ನೂರಾಯಿತು.

ಪಂಜಾಬ್ ಪರ ಪ್ರಬ್ಶಿಮ್ರಾನ್ 26, ಪ್ರಿಯಾಂಶ್ ಆರ್ಯ 24, ಜೋಶ್ ಇಂಗ್ಲಿಷ್ 39, ಶ್ರೇಯಸ್ ಅಯ್ಯರ್ 1, ನೇಹಲ್ ವಧೇರ 15, ಶಶಾಂಕ್ ಸಿಂಗ್ ಅಜೇಯ 59, ಮಾರ್ಕ್ ಸ್ಟೋಯಿನಿಶ್ 6 ರನ್ ಗಳಿಸಿದರು.ಆರ್ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್ ಪಡೆದರೆ ಜೋಶ್ ಹೆಝಲ್ವುಡ್, ರೊಮಾರಿಯಾ ಶೆಫರ್ಡ್ ತಲಾ 1 ವಿಕೆಟ್ ಪಡೆದರು.ಆರ್ಸಿಬಿ ತಂಡದ ಉತ್ತಮ ಫೀಲ್ಡಿಂಗ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸ್ಪಟ್ಟ ಆರ್ಸಿಬಿಗೆ ಫಿಲ್ ಸಾಲ್ಟ್ (16) ಬಿರುಸಿನ ಆರಂಭವೊದಗಿಸಿದರು. ಆದರೆ ಸಾಲ್ಟ್ ಆಟ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮತ್ತೊಂದೆಡೆ ವಿರಾಟ್ ಕೊಹ್ಲಿ ಎಚ್ಚರಿಕೆಯ ಇನಿಂಗ್ಸ್ ಕಟ್ಟಿದರು. ಅವರಿಗೆ ಮಯಂಕ್ ಅಗರವಾಲ್ (24) ಉತ್ತಮ ಬೆಂಬಲ ನೀಡಿದರು. ಆದರೆ ದೊಡ್ಡ ಜೊತೆಯಾಟವನ್ನು ಕಟ್ಟುವಲ್ಲಿ ವಿಫಲರಾದರು.ನಾಯಕ ರಜತ್ ಪಾಟೀದಾರ್ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. 16 ಎಸೆತಗಳಲ್ಲಿ 26 ರನ್ (1 ಸಿಕ್ಸರ್, 2 ಬೌಂಡರಿ) ಗಳಿಸಿದರು.ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಸಹ ಅರ್ಧಶತಕದ ಅಂಚಿನಲ್ಲಿ ಎಡವಿದರು. 35 ಎಸೆತಗಳಲ್ಲಿ ಮೂರು ಬೌಂಡರಿ ನೆರವಿನಿಂದ 43 ರನ್ ಗಳಿಸಿ ಔಟ್ ಆದರು.

ಆನಂತರ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಬಿರುಸಿನ ಆಟವಾಡುವ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು. ಈ ಪೈಕಿ ಕೈಲ್ ಜೇಮಿಸನ್ ಅವರ ಇನಿಂಗ್ಸ್ನ 17ನೇ ಓವರ್ನಲ್ಲಿ ಜಿತೇಶ್ ಹಾಗೂ ಲಿಯಾಮ್ ಸೇರಿಕೊಂಡು 23 ರನ್ ಸೊರೆಗೈದರು. ಆದರೆ ಅದೇ ಓವರ್ನಲ್ಲಿ 25 ರನ್ (2 ಸಿಕ್ಸರ್) ಗಳಿಸಿದ ಲಿವಿಂಗ್ಸ್ಟೋನ್ ಔಟ್ ಆದರು. ಮತ್ತೊಂದೆಡೆ ಉತ್ತಮವಾಗಿ ಆಡುತ್ತಿದ್ದ ಜಿತೇಶ್ ಅವರನ್ನು ಕನ್ನಡಿಗ ವಿಜಯಕುಮಾರ್ ವೈಶಾಖ ಕ್ಲೀನ್ ಬೌಲ್ಡ್ ಮಾಡಿದರು. ಜಿತೇಶ್ 10 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರು.ಜಿತೇಶ್ ಹಾಗೂ ಲಿವಿಂಗ್ಸ್ಟೋನ್ 12 ಎಸೆತಗಳ್ಲಲಿ 36 ರನ್ಗಳ ಜೊತೆಯಾಟ ಕಟ್ಟಿದರು. ಕೊನೆಯಲ್ಲಿ ರೊಮರಿಯೊ ಶೆಫಾರ್ಡ್ 17 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.ಅಂತಿಮವಾಗಿ ಆರ್ಸಿಬಿ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಪೇರಿಸಿತು. ಇನ್ನುಳಿದಂತೆ ಕೃಣಾಲ್ ಪಾಂಡ್ಯ 4 ಹಾಗೂ ಭುವನೇಶ್ವರ್ ಕುಮಾರ್ 1 ರನ್ ಗಳಿಸಿದರು.
ಪಂಜಾಬ್ ಪರ ಜೇಮಿಸನ್ ಹಾಗೂ ಅರ್ಷದೀಪ್ ಸಿಂಗ್ ತಲಾ ಮೂರು ಮತ್ತು ಅಜ್ಮತುಲ್ಲಾ ಒಮರ್ಝೈ, ವಿಜಯಕುಮಾರ್ ವೈಶಾಖ ಹಾಗೂ ಯಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ಗಳನ್ನು ಗಳಿಸಿದರು.
ಐಪಿಎಲ್ನ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿಯು ಇದುವರೆಗೆ 9 ಸಲ ಪ್ಲೇ ಆಫ್ ಪ್ರವೇಶಿಸಿದೆ. ಅದರಲ್ಲಿ ಮೂರು ಬಾರಿ (2009,2011 ಮತ್ತು 2016) ರನ್ನರ್ಸ್ ಅಪ್ ಆಗಿದೆ.
ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಕಪ್ ಗೆಲ್ಲುವ ರೋಚಕ ಕ್ಷಣಕ್ಕಾಗಿ ಅಭಿಮಾನಿಗಳ ಕಾಯುವಿಕೆಗೆ ಕೊನೆಯಾಗಿದೆ.