ಅಹಮ್ಮದಾಬಾದ್:ಐಪಿಎಲ್ ಕ್ರಿಕೆಟ್ನಿಂದ ಹಲವು ವರ್ಷಗಳ ಹಿಂದೆ ನಿವೃತ್ತಿ ಪಡೆದರೂ, ಈ ಹಿಂದೆ ತಂಡದ ಗೆಲುವಿಗಾಗಿ ಬೆವರು ಹರಿಸಿದ್ದ ಮಾಜಿ ಆಟಗಾರರು ಕೂಡ ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಭಾಗಿಯಾದರು.ಈ ಹಿಂದೆ ಹಲವು ವರ್ಷಗಳ ಕಾಲ ಆರ್ಸಿಬಿಯಲ್ಲಿ ಆಡಿದ್ದ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅವರೂ ಕ್ರೀಡಾಂಗಣದಲ್ಲಿ
ಹಾಜರಿದ್ದು ಗೆಲುವಿನ ಸಂಭ್ರಮದ ಭಾಗವಾದರು. ತಮ್ಮ ಪ್ರಿಯ ಗೆಳೆಯ ವಿರಾಟ್ ಕೊಹ್ಲಿ ಅವರನ್ನು ಅಪ್ಪಿ ಬಿಗಿದು ಅಭಿನಂದಿಸಿದರು. ಫೈನಲ್ ಪಂದ್ಯಕ್ಕೆ ಈ ಇಬ್ಬರು ಆಟಗಾರರನ್ನು ಆರ್ಸಿಬಿ ಬರ ಮಾಡಿಕೊಂಡಿತ್ತು. ತಂಡ ಗೆಲುವು ಸಾಧಿಸಿದಾಗ ಎಬಿಡಿ ಮತ್ತು ಕ್ರಿಸ್ ಗೇಲ್ ಆರ್ಸಿಬಿ ಜೆರ್ಸಿಯಲ್ಲಿ ಕಪ್ ಎತ್ತಿ ಹಿಡಿದು ಸಂಭ್ರಮದಲ್ಲಿ ಭಾಗವಹಿಸಿದರು. ಆರ್ಸಿಬಿ ಪರ ಕೊಹ್ಲಿ ಜೊತೆ ಗೇಲ್, ಎಬಿಡಿ ಸೇರಿದಂತೆ ಹಲವು ದಿಗ್ಗಜರು ಆಡಿದ್ದರು. ಖ್ಯಾತ ಆಟಗಾರರು ನಾಯಕತ್ವ ವಹಿಸಿದ ಪರಂಪರೆಯೂ ಇದೆ. 2008 ರಿಂದ ಇಲ್ಲಿಯವರೆಗೂ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್, ಡೇನಿಯಲ್ ವೆಟೋರಿ, ಶೇನ್ ವಾಟ್ಸನ್, ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿ ಅವರಂತಹ ಖ್ಯಾತನಾಮರು ತಂಡವನ್ನು ಮುನ್ನಡೆಸಿದ್ದರು. ಅವರೆಲ್ಲರ ನಾಯಕತ್ವ ಮತ್ತು ಆಟದ ಬಲದಿಂದ ಆರ್ಸಿಬಿಯ ಬ್ರ್ಯಾಂಡ್ ಮುಗಿಲುಮುಟ್ಟಿತು. ಆದರೆ ಪ್ರಶಸ್ತಿ ಕನಸು ಮಾತ್ರ ಕೈಗೂಡಿರಲಿಲ್ಲ. ಆದರೆ ಇದೇ ವರ್ಷ ನಾಯಕರಾಗಿ ನೇಮಕವಾದ ರಜತ್ ಪಾಟೀದಾರ್ ಅವರಿಗೆ ಅದೃಷ್ಟ ಒಲಿಯಿತು.
ವಿರಾಟ್ ಕೊಹ್ಲಿಯಂತಹ ದಿಗ್ಗಜ ಮತ್ತು ಯುವ ಆಟಗಾರರ ದಂಡಿನೊಂದಿಗೆ ಪ್ರಶಸ್ತಿ ಕನಸು ನನಸು ಮಾಡಿದರು.ಈ ಫ್ರಾಂಚೈಸಿಗೆ ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಅವರು ನೀಡಿರುವ ಕಾಣಿಕೆ ಅಮೋಘವಾದುದು. ಈ ಕಪ್ಗಾಗಿ ನಾವು ಒಟ್ಟಾಗಿ ಕನಸು ಕಂಡಿದ್ದೆವು, ಒಟ್ಟಾಗಿ ಬೆವರು ಹರಿಸಿದ್ದೇವೆ. ‘ಇದು ನಮ್ಮ ಗೆಲುವು ಮಾತ್ರವಲ್ಲ. ನಿಮ್ಮದೂ ಸಹ ಎಂದು ವಿರಾಟ್ ಕೊಹ್ಲಿ ಹೇಳಿದರು.