ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಶನಿವಾರ ಟಿ20 ವಿಶ್ವಕಪ್ ಜಯಿಸಿದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಚುಟುಕು ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದರು. ಈಗ ಅವರ ಸಾಲಿಗೆ ಎಡಗೈ ಸ್ಪಿನ್–ಆಲ್ರೌಂಡರ್ ಜಡೇಜ ಸೇರಿದ್ದಾರೆ. 35 ವರ್ಷದ ಅವರು ಅಮೆರಿಕ –ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ
ಆಡಿದ್ದರು. ಒಟ್ಟು 14 ಓವರ್ ಬೌಲಿಂಗ್ ಮಾಡಿ ಒಂದು ವಿಕೆಟ್ ಗಳಿಸಿದ್ದರು. 35 ರನ್ ಬಿಟ್ಟುಕೊಟ್ಟಿದ್ದರು. ಬ್ಯಾಟಿಂಗ್ನಲ್ಲಿ 39 ರನ್ ಗಳಿಸಿದ್ದರು. ಗಯಾನದಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಸೆಮಿಫೈನಲ್ನಲ್ಲಿ ಜಡೇಜ ಕ್ರೀಸ್ಗೆ ಬಂದಾಗ ತಂಡದ ಮೊತ್ತವು 6ಕ್ಕೆ146 ಆಗಿತ್ತು. ಜಡೇಜ ಅವರು 9 ಎಸೆತಗಳಲ್ಲಿ 17 ರನ್ ಗಳಿಸಿ ತಂಡದ ಮೊತ್ತವು 171ಕ್ಕೆ ಹೆಚ್ಚಲು ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿ ಭಾರತವು 68 ರನ್ಗಳಿಂದ ಜಯಿಸಿತ್ತು.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜಡೇಜ ಅವರು ಇಂತಹ ಪುಟ್ಟದಾದರೂ ಮಹತ್ವದ ಪಾತ್ರ ವಹಿಸಿದ ಹಲವಾರು ಪಂದ್ಯಗಳಿವೆ. ಬೌಲಿಂಗ್ನಲ್ಲಿಯೂ ಮಿಂಚಿದ್ದಾರೆ. ಕೊಲಂಬೊದಲ್ಲಿ 2009ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಜಡೇಜ ಪದಾರ್ಪಣೆ ಮಾಡಿದ್ದರು. 74 ಪಂದ್ಯಗಳಲ್ಲಿ ಆಡಿ 515 ರನ್ ಗಳಿಸಿದ್ದಾರೆ. ಒಟ್ಟು 54 ವಿಕೆಟ್ಗಳು ಅವರ ಖಾತೆಯಲ್ಲಿವೆ.ಟೆಸ್ಟ್ ಕ್ರಿಕೆಟ್ ತಮ್ಮ ಜೊತೆಗಾರ ಆರ್. ಅಶ್ವಿನ್ ಅವರೊಂದಿಗೆ ಮತ್ತಷ್ಟು ಪಂದ್ಯಗಳಲ್ಲಿ ಕಾಣಿಸಿಕೊಳ್ಳಬಹುದು. ಅಲ್ಲದೇ ಏಕದಿನ ಮತ್ತು ಐಪಿಎಲ್ ಟೂರ್ನಿಗಳಲ್ಲಿಯೂ ತಮ್ಮ ಆಟ ಮುಂದುವರಿಸುವ ಸಾಧ್ಯತೆ ಇದೆ.