ಜೈಪುರ:ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ನ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರ್ಜರಿ ಗೆಲುವು. ಲಖನೌ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್ಗಳ ಜಯ ದಾಖಲಿಸಿದ ರಾಜಸ್ಥಾನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿತು. ಮೊದಲು ಬ್ಯಾಟಿಂಗ್ ಮಾಡಿದ
ಲಖನೌ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.ಗುರಿ ಬೆನ್ನಟ್ಟಿದ ರಾಜಸ್ಥಾನ 19.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ರನ್ 225 ಗಳಿಸಿ ಗೆಲುವಿನ ನಗೆ ಬೀರಿತು. ಆರ್ಆರ್ಗೆ ವೈಭವ್ ಸೂರ್ಯವಂಶಿ ಹಾಗು ಯಶಸ್ವಿ ಜೈಸ್ವಾಲ್ ಸೇರಿ ಸ್ಫೋಟಕ ಆರಂಭ ನೀಡಿದರು. ಮೊದಲ ವಿಕೆಟ್ಗೆ ಇವರು 6.3 ಓವರ್ಗಳಲ್ಲಿ75 ರನ್ ಗಳಿಸಿದರು.
ಸಿಕ್ಸರ್, ಬೌಂಡರಿ ಸುರಿಮಳೆಗೈದ ವೈಭವ್ 38 ಎಸೆತಗಳಲ್ಲಿ 93 ರನ್ ಚಚ್ಚಿದರು. ಇವರ ವೈಭವದ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿ ಒಳಗೊಂಡಿದೆ. ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 8 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರೆ, ಧ್ರುವ್ ಜುರೆಲ್ ಅಜೇಯ ಅರ್ಧ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜುರೆಲ್ 38 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ ಪರ ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ 57 ಎಸೆತಗಳಲ್ಲಿ 5 ಸಿಕ್ಸರ್ ಹಾಗು 11 ಬೌಂಡರಿ ನೆರವಿನಿಂದ 96 ರನ್ ಗಳಿಸಿದರೆ, ಜೋಶ್ ಇಂಗ್ಲಿಸ್, ಕೇವಲ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 60 ರನ್ ಗಳಿಸಿ ಔಟಾದರು. ನಂತರ ಬಂದ ನಿಕೋಲಸ್ ಪೂರನ್(16 ರನ್) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.ಮೊದಲ ವಿಕೆಟ್ಗೆ ಜೋಶ್ ಇಂಗ್ಲಿಸ್ ಜೊತೆ ಸೇರಿಕೊಂಡು 50 ಎಸೆತಗಳಲ್ಲಿ 109 ರನ್ ಜೊತೆಯಾಟವಾಡಿದ್ದ ಮಿಚೆಲ್ ಮಾರ್ಷ್, 3ನೆ ವಿಕೆಟ್ಗೆ ಪಂತ್ ಜೊತೆಗೂಡಿ 64 ರನ್(41 ಎಸೆತ) ಜೊತೆಯಾಟವಾಡಿದರು.35 ರನ್ ಗಳಿಸಿದ್ದ ಪಂತ್, ಕೊನೆಯ ಓವರ್ನಲ್ಲಿ ರನೌಟ್ ಆದರು.ರಾಜಸ್ಥಾನ ರಾಯಲ್ಸ್ ಪರ ಯಶ್ ರಾಜ್ ಪೂಂಜಾ 2 ವಿಕೆಟ್ ಕಬಳಿಸಿದರು.













