ಧರ್ಮಶಾಲಾ: ಐಪಿಎಲ್ ಟೂರ್ನಿಯಲ್ಲಿ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರು ವಿಕೆಟ್ ಅಂತರದ ರೋಚಕ ಜಯ ಗಳಿಸಿತು.ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಪ್ರಭಸಿಮ್ರನ್ ಸಿಂಗ್ (57 ರನ್, 32 ಎಸೆತ) ಹಾಗೂ ಅಝ್ಮತ್ವುಲ್ಲಾ ಒಮರ್ಝೈ (38 ರನ್, 17 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ
ಎಂಟು ವಿಕೆಟ್ ನಷ್ಟಕ್ಕೆ 200 ರನ್ಗಳ ಮೊತ್ತ ಪೇರಿಸಿತು. ಮುಂಬೈ ಪರ ಶಾರ್ದೂಲ್ ಠಾಕೂರ್ 39 ರನ್ನಿಗೆ ನಾಲ್ಕು ವಿಕೆಟ್ ಕಬಳಿಸಿದರು.ಈ ಗುರಿ ಬೆನ್ನಟ್ಟಿದ ಮುಂಬೈ, ರಯಾನ್ ರಿಕೆಲ್ಟನ್ (48 ರನ್, 23 ಎಸೆತ) ಹಾಗೂ ತಿಲಕ್ ವರ್ಮಾ (ಅಜೇಯ 75 ರನ್, 33 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 19.5 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. 33 ಎಸೆತಗಳಲ್ಲಿ ತಲಾ ಆರು ಬೌಂಡರಿ ಹಾಗೂ ಸಿಕ್ಸರ್ಗಳಿಂದ 75 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮ ಮೂರು ಓವರ್ಗಳಲ್ಲಿ ಮುಂಬೈ ತಂಡವು 50 ರನ್ಗಳನ್ನು ಬೆನ್ನಟ್ಟಿ ರೋಚಕ ಗೆಲುವು ದಾಖಲಿಸಿತು.
ಸತತ ಐದನೇ ಸೋಲನುಭವಿಸಿದ ಪಂಜಾಬ್ ಕಿಂಗ್ಸ್ ಈವರೆಗೆ 12 ಪಂದ್ಯಗಳಲ್ಲಿ ಆರು ಗೆಲುವು, ಐದು ಸೋಲಿನೊಂದಿಗೆ 13 ಅಂಕ ಮಾತ್ರ ಗಳಿಸಿದೆ. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಅಲ್ಲದೆ +0.355ರ ರನ್ರೇಟ್ ಕಾಯ್ದುಕೊಂಡಿದೆ.
ಮತ್ತೊಂದೆಡೆ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿರುವ ಮುಂಬೈ ಒಂಬತ್ತನೇ ಸ್ಥಾನದಲ್ಲಿದೆ. 12 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ-ಆಫ್ ರೇಸ್ ಮತ್ತಷ್ಟು ರೋಚಕವೆನಿಸಿದೆ. ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡಗಳಿವೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಅನುಕ್ರಮವಾಗಿ ಐದು ಹಾಗೂ ಆರನೇ ಸ್ಥಾನದಲ್ಲಿದೆ.














