ಕಲ್ಲಪಳ್ಳಿ:ಕಾಞಂಗಾಡ್- ಪಾಣತ್ತೂರು- ಸುಳ್ಯ ಅಂತಾರಾಜ್ಯ ಮಾರ್ಗದಲ್ಲಿ, ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಮತ್ತೊಂದು ಬಸ್ ಜುಲೈ 1ರಿಂದ ಪ್ರಯಾಣ ಆರಂಭಿಸಿದೆ. ಬಸ್ಗೆ ಕಲ್ಲಪಳ್ಳಿಯಲ್ಲಿ ಸಾರ್ವಜನಿಕರು ಸ್ವಾಗತ ನೀಡಿದರು.ಕಾಞಂಗಾಡ್-ಪಾಣತ್ತೂರು- ಸುಳ್ಯ ಮಾರ್ಗದಲ್ಲಿ 5 ಬಸ್ ಸರ್ವೀಸ್ ನಡೆಸಲು ಅನುಮತಿ ಇದೆ. ಎರಡು ಬಸ್ ಈಗಾಗಲೇ
ಸರ್ವೀಸ್ ನಡೆಸುತಿದೆ. ಇದೀಗ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಮೂರನೇ ಬಸ್ ಓಡಾಟ ಆರಂಭಿಸಿದೆ.
ಕಲ್ಲಪಳ್ಳಿಯ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘ ಆಯೋಜಿಸಿದ ಸ್ವಾಗತ ಕಾರ್ಯಕ್ರಮದಲ್ಲಿ, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಮಾತನಾಡಿ ಸತತ ಪ್ರಯತ್ನದ ಫಲವಾಗಿ ಮೂರನೇ ಬಸ್ ಸರ್ವಿಸ್ ಪುನರಾರಂಭಿಸಿದೆ. ಸುಳ್ಯ ಪಾಣತ್ತೂರು ರಸ್ತೆಯಲ್ಲಿ ಓಡಾಡಬೇಕಾಗಿದ್ದ ಎಲ್ಲಾ 5 ಸರ್ವಿಸ್ ನಡೆಸುವಂತೆ ಮುಂದಿನ ದಿನಗಳಲ್ಲಿ ಪ್ರಯತ್ನ ಪಡಲಾಗುವುದು ಎಂದು ಹೇಳಿದರು. ಅಂತಾರಾಜ್ಯ ರಸ್ತೆಯಲ್ಲಿ ಕರ್ನಾಟಕದ ಭಾಗದ ಬಡ್ಡಡ್ಕದಿಂದ ನಾರ್ಕೋಡು ವರೇಗೆ ರಸ್ತೆ ತುಂಬಾ ಹದಗಟ್ಟಿದೆ ಈ ರಸ್ತೆಯನ್ನು ಸಂಚಾರ ಯೋಗ್ಯ ಮಾಡುವಂತೆ ಅಲ್ಲಿನ ಜನಪ್ರತಿನಿಧಿಗಳು ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಪಿ.ಎ.ಐಸಾಕ್, ಬಾಬಣ್ಣ ಎಂ.ಟಿ, ನಳಿನಾಕ್ಷಿ ದಾಮೋದರ, ಲಿಸ್ಸಿ ಜಾನ್, ಚಿದಾನಂದ ಗರುಗುಂಜ, ವಸಂತ ಎಂ.ಎಂ, ನಿತಿನ್ ಎಂ.ಎಸ್, ಜ್ಞಾನೇಶ್, ಹರೀಶ್ ಆಲುಗುಂಜ, ವಸಂತ ಕಮ್ಮಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಪದಾಧಿಕಾರಿಗಳಾದ ಚಿದಾನಂದ ಜಿ ಸ್ವಾಗತಿಸಿ, ವಸಂತ ಎಂ.ಎಂ.ವಂದಿಸಿದರು.
ಬಸ್ ವೇಳಾಪಟ್ಟಿ:
ಬೆಳಿಗ್ಗೆ 8.35ಕ್ಕೆ ಬಸ್ ಕಾಞಂಗಾಡ್ನಿಂದ ಹೊರಡಲಿದೆ.10.05ಕ್ಕೆ ಪಾಣತ್ತೂರಿನಿಂದ ಹೊರಟು 11.05ಕ್ಕೆ ಸುಳ್ಯ ತಲುಪಲಿದೆ. 11.35ಕ್ಕೆ ಸುಳ್ಯದಿಂದ ಹೊರಟು 12.35ಕ್ಕೆ ಪಾಣತ್ತೂರು ತಲುಪಿ 12.45ಕ್ಕೆ ಪಾಣತ್ತೂರಿನಿಂದ ಕಾಞಂಗಾಡ್ಗೆ ಹೊರಡಲಿದೆ.