ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರು ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಭೇಟಿ ಮಾಡಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಎರಡು ದಿನಗಳ ಬಿಹಾರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ವೈಭವ್ ಅವರನ್ನು ಭೇಟಿ ಮಾಡಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ಪಾಟ್ನಾ ವಿಮಾನ ನಿಲ್ದಾಣದಲ್ಲಿ

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದೆ. ಅವರ ಕ್ರಿಕೆಟ್ ಸಾಧನೆ ಕುರಿತು ದೇಶವೇ ಮಾತನಾಡುತ್ತಿದೆ. ಅವರಿಗೆ ಒಳಿತಾಗಲಿ’ ಎಂದು ಆರೈಸಿದ್ದಾರೆ.ಕೇವಲ 14 ವರ್ಷದ ಎಡಗೈ ದಾಂಡಿಗ ವೈಭವ್ ಅವರು ಅತಿ ಕಿರಿಯ ವಯಸ್ಸಿನಲ್ಲಿ ಐಪಿಎಲ್ ಪಾದಾರ್ಪಣೆ ಮಾಡಿದ ದಾಖಲೆ ಇವರ ಹೆಸರಲ್ಲಿದೆ.
ಬಿಹಾರ ಮೂಲದ ವೈಭವ್, ಈ ಬಾರಿ ರಾಜಸ್ಥಾನ ರಾಯಲ್ಸ್ ಪರ 7 ಪಂದ್ಯಗಳಿಂದ 206.56 ಸ್ಟ್ರೈಕ್ ರೇಟ್ನಲ್ಲಿ 252ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಕೂಡ ಸೇರಿದೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ವೈಭವ್ ಅವರು ಇಂಗ್ಲೆಂಡ್ ವಿರುದ್ಧದ ಅಂಡರ್-19 ಏಕದಿನ ಸರಣಿಗೆ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ.