ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಫೆ.1ರಂದು ಆರಂಭಗೊಂಡಿದೆ. ಪಂಜ ಸೀಮೆಯ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರೋತ್ಸವ ಹಲವು ವೈವಿಧ್ಯತೆಗಳಿಂದ ಕೂಡಿದೆ. ಅದರಲ್ಲಿ ಮುಖ್ಯವಾದುದು ನಾಗತೀರ್ಥ ಹೊಳೆಯ ಮೂಲಸ್ಥಾನ ಬಂಟಮಲೆಯಿಂದ ತೀರ್ಥ ತರುವ ಕಾರ್ಯಕ್ರಮ. ಪ್ರತಿ ವರ್ಷ ಧ್ವಜಾರೋಹಣ ನಡೆದ ಮರುದಿನ ದೇವಸ್ಥಾನಕ್ಕೆ ಸಂಬಂಧಪಟ್ಟವರು ಸುಮಾರು ಒಂಭತ್ತು ಕಿ.ಮಿ.ದೂರದ
ನಾಗ ತೀರ್ಥ ಹೊಳೆಯ ಉಗಮ ಸ್ಥಾನದಿಂದ ತೀರ್ಥ ತರಲಾಗುತ್ತದೆ. ಭಕ್ತಿ ಶ್ರದ್ಧೆಯಿಂದ ತರುವ ಈ ತೀರ್ಥದಿಂದ ಜಾತ್ರೋತ್ಸವ ಸಂದರ್ಭ ಸದಾಶಿವನಿಗೆ ಅಭಿಷೇಕ ಮಾಡಲಾಗುತ್ತದೆ.

ಏನಿದರ ಹಿನ್ನಲೆ:
ಕುಮಾರಧಾರಾ ನದಿಯ ಉಪನದಿ ನಾಗತೀರ್ಥ ಹೊಳೆ.
ಬಂಟಮಲೆಯಿಂದ ಹುಟ್ಟಿ ಹರಿದು ಕುಮಾರಧಾರಾ ನದಿಯ ಜೊತೆ ಸೇರಿ ಹರಿಯುವ ನಾಗತೀರ್ಥ ಹೊಳೆಯಿಂದ ಪ್ರತಿ ದಿನ ತೀರ್ಥ ತಂದು
ಪಂಜ ದೇವಸ್ಥಾನದಲ್ಲಿ ಸದಾಶಿವ ದೇವರಿಗೆ ಅಭಿಷೇಕ, ಪೂಜೆ ನಡೆಸಲಾಗುತ್ತದೆ. ವರ್ಷದಲ್ಲಿ ಒಂದು ದಿನ ನಾಗತೀರ್ಥದ ಮೂಲ ಸ್ಥಾನದಿಂದಲೇ ತೀರ್ಥ ತಂದು ಅಭಿಷೇಕ ನಡೆಸಲಾಗುತ್ತದೆ. ಅನಾದಿ ಕಾಲದಲ್ಲಿ ಅರ್ಚಕರು ನಾಗತೀರ್ಥದ ಉಗಮ ಸ್ಥಾನ ಬಂಟಮಲೆಗೆ ತೆರಳಿ ಸದಾಶಿವನಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಮಳೆಗಾಲದಲ್ಲಿ ಅಲ್ಲಿಗೆ ಅರ್ಚಕರಿಗೆ ತೆರಳಲು ಸಾಧ್ಯವಾಗದ ಸಂದರ್ಭದಲ್ಲಿ

ಪೂಜೆ ನಿಂತು ಹೋಯಿತು. ಆ ಸಂದರ್ಭದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸದಾಶಿವ ಉದ್ಭವಗೊಂಡು ಪ್ರತ್ಯಕ್ಷರಾದರು. ಬಳಿಕ ಇಲ್ಲಿ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೂ ಪ್ರತಿ ದಿನ ನಾಗತೀರ್ಥದ ಜಲದಿಂದಲೇ ಅಭಿಷೇಕ ಮಾಡುವುದು ಕ್ರಮ. ಕಳೆದ 12-13 ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ವರ್ಷದಲ್ಲಿ ಒಂದು ದಿನ ನಾಗತೀರ್ಥದ ಮೂಲಸ್ಥಾನದಿಂದ ತೀರ್ಥ ತಂದರೆ ಸದಾಶಿವನಿಗೆ ಇನ್ನಷ್ಟು ಪ್ರಿಯ ಎಂದು ಕಂಡು ಬಂತು. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಜಾತ್ರೋತ್ಸವದ ಸಂದರ್ಭದಲ್ಲಿ ನಾಗತೀರ್ಥದ ಮೂಲಸ್ಥಾನದಿಂದ ತೀರ್ಥ ತರುವ ಕ್ರಮ ಆರಂಭಗೊಂಡಿತು. ಇಂದು ಬೆಳಿಗ್ಗೆ 7 ಗಂಟೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರ್, ಅರ್ಚಕರಾದ ನರೇಶ್ ಕೃಷ್ಣ ನೇತೃತ್ವದಲ್ಲಿ ತೆರಳಿ ಮೂಲಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಡದಲ್ಲಿ ತೀರ್ಥ ಸಂಗ್ರಹಿಸಿ ತರಲಾಯಿತು. ಹೋಗುವ ಸಂದರ್ಭದಲ್ಲಿ ಮೂಲ ಸ್ಥಾನಕ್ಕೆ ಎರಡು ಕಿ.ಮಿ. ಸಮೀಪದವರೆಗೆ ವಾಹನದಲ್ಲಿ ತೆರಳಿ ಅಲ್ಲಿಂದ ಪಾದಯಾತ್ರೆಯಲ್ಲಿ ಹೋಗಿ ಕೊಡದಲ್ಲಿ ತೀರ್ಥ ಜಲ ಶೇಖರಿಸಲಾಯಿತು.ದೀಪ,
ಚೆಂಡೆ, ಜಾಗಟೆ,ಮೇಳ ದೊಂದಿಗೆ

ಭಕ್ತಿ ಸಂಭ್ರಮದ ವಾತಾವರಣದಲ್ಲಿ ತೀರ್ಥವನ್ನು ದೇವಾಲಯಕ್ಕೆ ತರಲಾಯಿತು. ಹಿಂತಿರುಗಿ ಬರುವ ಸಂದರ್ಭದಲ್ಲಿ ಬಂಟಮಲೆಯ ತುದಿಯಿಂದ ದೇವಸ್ಥಾನದ ತನಕ ಸುಮಾರು 9 ಕಿ.ಮಿ.ದೂರ ಎಲ್ಲರೂ ಪಾದಯಾತ್ರೆಯಲ್ಲಿಯೇ ಅಗಮಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರ್, ಸದಸ್ಯರಾದ ಸಂತೋಷ್ ಕುಮಾರ್ ರೈ, ಪವಿತ್ರ ಮಲ್ಲೆಟ್ಟಿ, ಧರ್ಮಣ್ಣ ನಾಯ್ಕ ಗರಡಿ, ಭಕ್ತರು ಭಾಗವಹಿಸಿದ್ದರು. ಪಂಬೆತ್ತಾಡಿ, ಕೂತ್ಕುಂಜ, ಐವತ್ತೊಕ್ಕಲು,ಕೇನ್ಯ, ಬಳ್ಪ, ಎಣ್ಮೂರು, ಕಲ್ಮಡ್ಕ ಭಾಗದ ಜನರು ಭಾಗವಹಿಸಿದ್ದರು.
