*ಡಾ. ಸುಂದರ ಕೇನಾಜೆ.
ತುಳುನಾಡಿನಲ್ಲಿ ಶಕ್ತಿಯ ಆರಾಧನೆ ಬಹಳ ಪೂರ್ವದಿಂದ ನಡೆಯುತ್ತಾ ಬಂದಿದೆ. ಇದಕ್ಕೆ ಪಾಡ್ದನ ಮತ್ತು ಐತಿಹಾಸಿಕವಾದ ಒಂದಷ್ಟು ದಾಖಲೆಗಳೂ ಇವೆ. ಮಾರಿಯ ಆಚರಣೆ ದೊಡ್ಡ ಮಟ್ಟದಲ್ಲಿ ಇಲ್ಲಿ ಇಲ್ಲದೇ ಇದ್ದರೂ ಮಾರಿಗೆ ಸಂಬಂಧಿಸಿದ ಕಥೆಗಳಿಗೇನು ಕೊರತೆ ಇಲ್ಲ. ಮಾರಿ ಜನಪದ ರೂಪದಲ್ಲಿ, ಕ್ರಮೇಣ ಶಿಷ್ಟ ಆರಾಧನೆಯ ರೂಪದಲ್ಲಿ ಅಲ್ಲಿಲ್ಲಿ ನಡೆಯುತ್ತಾ ಬಂದಿರುವುದಕ್ಕೂ ದಾಖಲೆಗಳಿವೆ. ಇದರ ಜತೆಗೆ ಬೇರೆಬೇರೆ ಹೆಸರಿನ ಚಾಮುಂಡಿ, ಜುಮಾದಿ, ರಕ್ತೇಶ್ವರಿ, ಕಲ್ಲುರ್ಟಿ ಇನ್ನೂ ಅನೇಕ ಸ್ತ್ರೀ ದೇವತೆಗಳು, ಶಕ್ತಿಪೂಜೆ, ಗೊಂದೋಲು, ಮಹಮ್ಮಾಯಿ ಮತ್ತಿತರ
ಶಕ್ತಿ ದೇವತೆಗಳ ಆರಾಧನೆಗಳು ಜನಪದ ರೂಪದಲ್ಲಿ ಹಿಂದಿನಿಂದಲೂ ನಡೆಯುತ್ತಿದೆ. ಇಂತಹ ಹೆಣ್ಣು ದೇವತೆಗಳು ತುಳುನಾಡಿನಲ್ಲಿ ಆರಾಧನೆಗೊಳ್ಳಲು ಕಾರಣವಾದ ಅಂಶಗಳನ್ನು ಅನೇಕ ಜನಪದ ಕಥೆಗಳು ಪಾಡ್ದನ ರೂಪದಲ್ಲಿ ನೀಡಿದ್ದನ್ನು ಕಾಣಬಹುದು. ತುಳುನಾಡಿನ ಪರತ್ತಿ ಮಂಙಣೆ ಪಾಡ್ದನ ಕಥೆಯನ್ನು(ಈ ಅಂಕಣದಲ್ಲಿ ಹಿಂದೆ ವಿಶ್ಲೇಷಿಸಲಾಗಿದೆ) ಹೋಲುವ, ಆದರೆ ಇಲ್ಲಿ ಹೆಂಡತಿಯ ಬದಲು ಗಂಡನೇ ಚಿತೆಗೇರುವ, ಹೆಂಡತಿ ಆರಾಧನೆಗೆ ಒಳಗಾಗಿ ಸೇಡು ತೀರಿಸಿಕೊಳ್ಳುವ ಒಂದು ಪಾಡ್ದನವಿದೆ. ಅದೇ ಈ ಮುಕಾಂಬಿ ಜೇವು(ಬಾಲೆ).

ಮೇಲ್ವರ್ಗದ ಹೆಣ್ಣಿನ ಶೋಷಣೆಯ ತೀಕ್ಷ್ಣ ಪ್ರತೀಕಾರ, ಗಂಡಿನ ಅಸಹಾಯಕ ಅವಸಾನ ಈ ಕಥೆಯ ತಿರುಳು. ಪರತ್ತಿ ಮಂಙಣೆಯಲ್ಲಿ ತಳವರ್ಗದ ಹೆಣ್ಣು ಮಗಳನ್ನು ಮೇಲ್ವರ್ಗದ ಬಲ್ಲಾಳ ಮೋಹಿಸಿ ವ್ಯವಸ್ಥೆಯನ್ನೇ ಅಂತ್ಯಗೊಳಿಸಿದ ಕಥೆ ಇದ್ದರೆ, ಇಲ್ಲಿ ಮೇಲ್ವರ್ಗದ ಹೆಣ್ಣನ್ನು ಅದೇ ವರ್ಗದ ದರ್ಪಿಷ್ಟನೋರ್ವ ಕೆಡಿಸಿದ, ಅದಕ್ಕೆ ಪ್ರತೀಕಾರವಾಗಿ ಹೆಣ್ಣು ಸೇಡು ತೀರಿಸಲು ದೈವದ ಜತೆ ಸೇರಿದ, ಪ್ರೀತಿಯ ಆತ್ಯಂತಿಕವೆಂಬಂತೆ ಗಂಡ ಚಿತೆಗೇರಿದ ಕಥೆಯಿದೆ. ಸಮ್ಮತವಲ್ಲದ ಸಂಬಂಧ ಪ್ರತೀಕಾರವಾಗಿ ಮಾರ್ಪಡುವ, ಶೋಷಣೆ ನಡೆದ ಪುರುಷ ವ್ಯವಸ್ಥೆಯಲ್ಲಿ ಜಾತಿ, ಧರ್ಮದ ಅಂತರವಿಲ್ಲದೇ ಸಂಪತ್ತು, ಅಧಿಕಾರವೇ ನಿರ್ಣಾಯಕವಾಗುವ ಸಂದೇಶ ಇಲ್ಲಿಯದು.
ಕಡಂಬಾರು ಮಯ್ಯ ಆ ಊರಿನ ಬಹುದೊಡ್ಡ ಧನಿಕ. ಆಸ್ತಿಗೆ ಕೊನೆಯಿಲ್ಲ, ಅನ್ನಕ್ಕೆ ಬರವಿಲ್ಲ. ಕೈಗೊಂದಾಳು, ಕಾಲಿಗೊಂದಾಳು. ಏಳು ಸೊಸೆ, ಏಳು ಮಗಳನ್ನು ಪಡೆದು ಸಾಕೆನಿಸಬೇಕಾದ ಜೀವ, ಪಡ್ಪಿರೆಯ(ಚಾವಡಿ) ಬೋದಿಕೆ ಕಂಬಕ್ಕೆ ಕಟ್ಟಿದ್ದ ಏಳುಕೈಯ ಚಿನ್ನದ ಕೊಪ್ಪರಿಗೆಯ ಸಂಕೋಲೆ ಸಂಪತ್ತನ್ನು ಅಣಕಿಸುವಂತೆ ಬಿದ್ದುಕೊಂಡಿತ್ತು. ಅದನ್ನು ಕಾಯುವ ಏಳು ಹೆಡೆಯ ನಾಗ, ಬಿಚ್ಚಿದ ಹೆಡೆಯನ್ನು ಮುಚ್ಚಲು ಮರೆತಂತೆ ಎತ್ತಿ ನಿಂತಿತ್ತು. ಪಡಸಾಲೆಯ ಬಲತುದಿಯಲ್ಲಿ ಜೋಲಾಡುವ ಏಳು ಹಲಗೆಯ ಚಿನ್ನದ ಉಯ್ಯಾಲೆ ತೂಗಲು ಬರುವ ಯಜಮಾನನಿಗಾಗಿ ಕಾಯುವಂತ್ತಿತ್ತು. ಮಧ್ಯಾಹ್ನದ ಊಟ ಮುಗಿಸಿ, ತಿಳಿ ನಿದ್ದೆಯನ್ನೂ ಕಳೆದು, ವೀಳ್ಯ ಮೆದ್ದು ಉಯ್ಯಾಲೆಯಲ್ಲಿ ತೂಗುವ ಲಹರಿಯಿಂದ ಬಂದು ಕುಳಿತ ನಡುವಯಸ್ಸು ದಾಟಿದ ಮಯ್ಯನಿಗೆ ದೂರದ ಕಟ್ಟಪುಣಿ(ಗದ್ದೆ ಬದು)ಯಲ್ಲಿ ಬರುತ್ತಿರುವ ಆಕರ್ಷಕ ಜೋಡಿ ಕಾಣಿಸಿತು. ಬಂದವರಲ್ಲಿ ಒಬ್ಬ ಗಂಡು, ಇನ್ನೊಬ್ಬಾಕೆ ಮದುಮಗಳು…. (ಮುಕಾಂಬಿ) ಲಹರಿಯಲ್ಲಿ ತೂಗುತ್ತಿದ್ದ ಮಯ್ಯನ ಮೈ ಬಿಸಿಯಾಯಿತು, ಮುಖವರಳಿತು. ಪರಿಚಯದ ಮಾತಾಯಿತು. ತಮ್ಮದೇ ಕುಲದ, ಸಂಬಂಧದಲ್ಲಿ ಹತ್ತಿರದ ಜೋಡಿ ಎಂದು ಮನದಟ್ಟಾಯಿತು. ದಕ್ಷಿಣ ಕೇರಳಕ್ಕೆ ಶಾಸ್ತ್ರ ಕಲಿಯಲು ತೆರಳುವ ಗಂಡ, ತಾನೂ ಬರುವೆನೆಂದು ಹಠ ಹಿಡಿದು ಹೊರಟ ಹೆಂಡತಿ. ಆದರೆ ಒಂದು ಸೇರು ಭತ್ತಕ್ಕೆ ತಲೆ ಕಡಿಯುವ ದಕ್ಷಿಣ ಕೇರಳಕ್ಕೆ ಕಾಲಿಡಲು ಕಾಡಿದ ಭಯದಿಂದಾಗಿ, ತುಳುರಾಜ್ಯದ ಗಡಿಯಲ್ಲಿ ದಾನ-ಧರ್ಮ, ಕರ್ಮಗಳ (ಕು)ಖ್ಯಾತಿಗೆ ಒಳಗಾದ ಕಡಂಬಾರು ಮಯ್ಯನ ಆಶ್ರಯ ಕೇಳಲು ಬಂದವರು…. ಇವರು.

ಕಡಂಬಾರು ಮಯ್ಯ ಹೂಂ… ಗುಟ್ಟಿದ. ನಡುವಯಸ್ಸು ದಾಟಿದ ತಾನು ತಂದೆಗೆ ಸಮಾನನೆಂದ. ಏಳು ಸೊಸೆಯಂದಿರಲ್ಲಿ ಎಂಟನೆಯವಳೆಂದ. ಏಳು ಮಗಳಂದಿರಲ್ಲಿ ಕೊನೆಯವಳೆಂದ. ಈ ಮನೆಯಲ್ಲಿ ಇವಳನ್ನು ಬಿಟ್ಟು ನೀನು ಗಡಿ ದಾಟಿ ಕೇರಳಕ್ಕೆ ಹೋಗುವುದಕ್ಕೆ ಭಯಬೇಡವೆಂದ. ನಂಬಿದ ಗಂಡ, ಬಿಡಲರಿಯದ ಹೆಂಡತಿಗೆ ಧೈರ್ಯ ತುಂಬಿದ. ದಕ್ಷಿಣ ಕೇರಳದ ಕಟುಕರ ಕತ್ತಿಯ ಚೂಪನ್ನು ಕಣ್ಣಿಗೆ ಕಟ್ಟಿಸಿದ. ವರ್ಷಗಳ ಕಲಿಕೆಯನ್ನು ಆರು ತಿಂಗಳಲ್ಲಿ, ಆರು ತಿಂಗಳ ಕಲಿಕೆಯನ್ನು ಆರು ವಾರಗಳಲ್ಲಿ, ಆರು ವಾರಗಳದ್ದನ್ನು ಆರು ದಿನಗಳಲ್ಲಿ, ಆರು ದಿನಗಳದ್ದನ್ನು ಆರು ಗಳಿಗೆಯಲ್ಲಿ ಕಲಿತು ಬರುವೆನೆಂದ, ಜೋಳಿಗೆ ಹಾಕಿ ಶಾಸ್ತ್ರ ಕಲಿಯಲು ಹೊರಟೇ ಬಿಟ್ಟ.
ಹೀಗೆ…., ತುಳುನಾಡ ಗಡಿ ದಾಟಿಯೂ ಹೋಗಿ ಬಿಟ್ಟ ಈ ಬಿಡಲರಿಯದ ಗಂಡ…. ಇತ್ತ ಮುಕಾಂಬಿ ಕಡಂಬಾರ ಮಯ್ಯನ ಮನೆ ತುಂಬಿದ ಸೊಸೆಯಂತೆ, ಹುಟ್ಟಿ ಬೆಳೆದ ಮಗಳಂತೆ ಒಳಕೋಣೆ ಸೇರಿ ಚಿಲಕ ಹಾಕಿ ಮಲಗಿಕೊಂಡಳು. ಹೀಗಿರುವಾಗ…. ನಿದ್ದೆ ಹತ್ತದ ಕಣ್ಣು, ನಟ್ಟ ನಡುರಾತ್ರಿಯ ನಿಶಬ್ಧ…. ಬಾಗಿಲ ಬಡಿತ ಕಿವಿಪ್ಪಳಿಸಿತು. ಮಾವನ ಪ್ರಾಯದ, ಅಪ್ಪನ ವಯಸ್ಸಿನ ಮಯ್ಯನ ಸ್ವರ ಗುಡುಗಿತು. “ಬಾಗಿಲು ತೆಗೆಯೇ ಜೇವು, ನಿನ್ನ ಯೋಗಕ್ಷೇಮ ವಿಚಾರಿಸಬೇಕು….. ನಿನ್ನ ಊಟನಿದ್ದೆಯನ್ನು ಕೇಳಬೇಕು…. ಬೇಗನೇ ಬಾಗಿಲು ತೆಗೆ” ಎಂದು. ತಂತ್ರದಲ್ಲಿ ಕುತಂತ್ರದ ವಾಸನೆ ಬಡಿದ ಜೇವು, ಬಾಗಿಲು ತೆಗೆಯಲು ಒಪ್ಪದಾದಳು. ಮಯ್ಯ ನಾನಾ ರೀತಿ ಬೇಡಿದ, ಕಾಡಿದ, ಕೊನೆಗೆ ಬೆದರಿಸಿ, ಬಾಗಿಲ ಒದ್ದು ಮುರಿದ. ಒಳ ಸೇರಿದ, ಬೆದರಿದ ಬಾಲೆಯನ್ನು ಕೆಡವಿ ಕೆಡಿಸಿದ.
ಅದೋ ನೋಡಿ…. ಅದುವರಗೆ ಅಬಲೆಯಾಗಿದ್ದ ಬಾಲೆ ಚಂಡಿಯಾದಳು. ಕಡಂಬಾರು ಮಯ್ಯನ ಪಿತ್ತಕಾರಿಸುವ ಚಾಮುಂಡಿಯಾದಳು. ಕೊನೆಗೆ ಬೇಡವೆನಿಸಿದ ತನ್ನ ದೇಹವನ್ನೇ ಕೆರೆಗೆ ಹಾರವಾಗಿಸಿದಳು. ಆ ರಾತ್ರಿ ದುಸ್ವಪ್ನ ಕಂಡ ಗಂಡ ಓಡೋಡಿ ಬಂದ. ಚಿತೆಯಲ್ಲಿ ಉರಿಯುವ ಹೆಂಡತಿಯ ಮುಖ ಮಾತ್ರ ಕಂಡ, ಮಯ್ಯನಿಗೆ ಶಾಪ ಕೊಟ್ಟ, ತಾನೂ ಹಾರಿ ಭಸ್ಮವಾದ. ಮುಕಾಂಬಿ ಉಗ್ರರೂಪದ ಗುಳಿಗ(ಪುರುಷ ಸ್ವರೂಪಿ) ದೈವದ ಜತೆ ಸೇರಿ ಮಯ್ಯನನ್ನು ಬಲಿ ತೆಗೆದುಕೊಂಡಳು, ತುಳುವರ ಪಾಲಿನ ದೇವತೆಯಾದಳು.
ಕಥೆ ಇಷ್ಟೇ… ಆದರೆ ತುಳು ಪಾಡ್ದನ ಕಟ್ಟಿಕೊಡುವ ಆಶಯ ಅಗಾಧ. ಇದನ್ನೇ ಹೋಲುವ ಕಥೆ, ಶಿಷ್ಟ ಪರಂಪರೆಯ ಅನೇಕ ಯಕ್ಷಗಾನದ ಮಹಾತ್ಮೆ ಪ್ರಸಂಗಗಳಲ್ಲೂ ಕಾಣಸಿಗುತ್ತದೆ. ಅದೇ ರೀತಿ ಇಂತಹಾ ಪಾಡ್ದನ ಗದ್ದೆ ಕೆಲಸದ ಮಧ್ಯೆಯೂ ಕಾಣಸಿಗುತ್ತಿತ್ತು. ಎರಡರ ಆಶಯವೂ ಎಚ್ಚರಿಕೆಯ ಗಂಟೆಯನ್ನು ರವಾನಿಸುವುದೇ ಆಗಿತ್ತು. ಜತೆಗೆ ಮಾತೃಪ್ರಧಾನ ವ್ಯವಸ್ಥೆಯನ್ನು ಪುರುಷ ಪ್ರಧಾನ ವ್ಯವಸ್ಥೆ ಹಿಡಿತದಲ್ಲಿ ಇಟ್ಟುಕೊಳ್ಳುವ ಮನಸ್ಥಿತಿಯ ವಿರುದ್ಧದ ಜಾಗೃತಿಯೂ ಆಗಿತ್ತು. ಶಕ್ತಿಯ ಆರಾಧನೆಗೆ ನೆಲೆ ನೀಡಿ ಸತ್ವ ತುಂಬಿದ ಇಂತಹಾ ಅನೇಕ ಸಂಕಥನಗಳು ತುಳುನಾಡಿನ ಅಲ್ಲಲ್ಲಿ ಕಾಣಸಿಗುತ್ತಿತ್ತು.

(ಡಾ. ಸುಂದರ ಕೇನಾಜೆ ಲೇಖಕರು, ಅಂಕಣಕಾರರು. ಜಾನಪದ ಸಂಶೋಧಕರು)