ಕ್ವಾಲಾಲಂಪುರ: ಐಸಿಸಿ 19 ವರ್ಷದೊಳಗಿನ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ ಸತತ ಎರಡನೇ ಬಾರಿಗೆ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಹಾಲಿ ಚಾಂಪಿಯನ್ ಭಾರತ ತಂಡವು ಇಂದು ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಅಂತರದ
ಭರ್ಜರಿ ಜಯ ದಾಖಲಿಸಿತು.83 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ 11.2 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತ ತಂಡವನ್ನು ಕರ್ನಾಟಕದ ಆಟಗಾರ್ತಿ ನಿಕಿ ಪ್ರಸಾದ್ ಮುನ್ನಡೆಸಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, 20 ಓವರ್ಗಳಲ್ಲಿ 82 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಭಾರತದ ಪರ ತೃಷಾ ಗೊಂಗಡಿ ಮೂರು ಮತ್ತು ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಮತ್ತು ಪಾರುಣಿಕ ಸಿಸೋಡಿಯಾ ತಲಾ ಎರಡು ವಿಕೆಟ್ಗಳನ್ನು ಗಳಿಸಿದರು. ಬಳಿಕ ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಜಿ. ಕಮಲಿನಿ (9) ವಿಕೆಟ್ ನಷ್ಟವಾಯಿತು. ಆದರೆ ಸನಿಕ ಚಾಲ್ಕೆ ಜೊತೆ ಸೇರಿಕೊಂಡ ತೃಷಾ ತಂಡವನ್ನು ಗೆಲುವಿನ ದಡ ಸೇರಿಸಿದರು.
ಬ್ಯಾಟಿಂಗ್ನಲ್ಲೂ ಮಿಂಚಿದ ತೃಷಾ 33 ಎಸೆತಗಳಲ್ಲಿ 44 ರನ್ (8 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಸನಿಕ ಚಾಲ್ಕೆ ಅಜೇಯ 26 ರನ್ ಗಳಿಸಿದರು. ಒಂದೂ ಪಂದ್ಯದಲ್ಲೂ ಸೋಲು ಕಾಣದೇ ಭಾರತ ಕಿರೀಟ ಜಯಿಸಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿತ್ತು.