ಸುಳ್ಯ: ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಒಳಿತಿಗಾಗಿ ಮತ್ತು ಆಡಳಿತ ಪಾರದರ್ಶಕತೆಗಾಗಿ ದೇವಸ್ಥಾನದ ಭಕ್ತರು ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟರೆ ಭಕ್ತರ ಆಗ್ರಹವನ್ನು ರಾಜಕೀಯ ಎಂದು ವಿಷಯಾಂತರ ಮಾಡುವುದು ಖಂಡನೀಯ ಎಂದು ಪಂಜದ ಮುಖಂಡರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ
ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಶಂಕರ್ ಕುಮಾರ್ ಮುಚ್ಚಿಲ, ಪ್ರಮುಖರಾದ ಚಂದ್ರಶೇಖರ ಶಾಸ್ತ್ರಿ, ಪ್ರಕಾಶ್ ಜಾಕೆ, ಅಂಕುಶ್ ಕುದ್ವ, ಶರತ್ ಕುದ್ವ ಹಾಗು ನಾರಾಯಣ ಕೃಷ್ಣನಗರ ಮಾತನಾಡಿ ‘ಭಕ್ತರಾದ ನಾವು ನೇರವಾಗಿ ದೇವಾಲಯದ ಸಮಿತಿಯವರಲ್ಲಿ ಮನವಿ ಮಾಡಿದ್ದೇವೆಯೇ ಹೊರತು ರಾಜಕೀಯ ಪಕ್ಷಕ್ಕೆ ಮನವಿ ಮಾಡಿದ್ದಿಲ್ಲ.ಆದರೆ ಕೆಲವರು ಈ ವಿಷಯವನ್ನು ರಾಜಕೀಯಗೊಳಿಸಿರುವುದು ಮತ್ತು ವೈಯುಕ್ತಿಕವಾಗಿ ಆರೋಪ ಮಾಡಿರುವುದನ್ನು ದುರದೃಷ್ಟಕರ ಮತ್ತು ಖಂಡನೀಯ ಎಂದರು.
ದೇವಳದ ನೌಕರರ ವಜಾ, ಒಳಾಂಗಣದ ಶಾಶ್ವತ ಛಾವಣಿಯ ನಿರ್ಮಾಣ, ಅಡಿಕೆ ತೋಟದ ಹರಾಜು, ವ್ಯವಸ್ಥಾಪನಾ ಸಮಿತಿಯ ಸದಸ್ಯರ ರಾಜೀನಾಮೆ ಮತ್ತಿತರ ವಿಚಾರಗಳ ಬಗ್ಗೆ ಭಕ್ತಾದಿಗಳಲ್ಲಿ ಉಂಟಾದ ಸಂಶಯಗಳ ನಿವಾರಣೆಗೆ ಸಭೆ ಕರೆಯಬೇಕೆಂದು ಮನವಿ ಸಲ್ಲಿಸಿದ್ದೆವು. ಆ ಪ್ರಕಾರ ವ್ಯವಸ್ಥಾಪನಾ ಸಮಿತಿಯು ಸಭೆ ಕರೆದಿದ್ದು ಸಭೆಯಲ್ಲಿ

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ನೀಡಿದ ಲೆಕ್ಕಾಚಾರದಲ್ಲಿ ಕೆಲವೊಂದು ವ್ಯತ್ಯಾಸ ಕಂಡು ಬಂದಿತ್ತು, ಅದನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ಒದಗಿಸಿರುವುದಿಲ್ಲ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಎಂದು ಸಭೆ ಆಗ್ರಸಿತ್ತು.ಇಂತಹ ಅಂಶಗಳನ್ನು ನಾವು ಕೇಳಿದ್ದೇವೆಯೇ ಹೊರತು ಅವ್ಯಹಾರ ನಡೆದಿದೆ ಎಂದು ನಾವು ಆರೋಪ ಮಾಡಿರುವುದಿಲ್ಲ. ಭಕ್ತರ ಈ ಆಗ್ರಹವನ್ನು ರಾಜಕೀಯ ಆರೋಪ ಎಂದು
ಬಿಂಬಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಭಕ್ತರ ಮುಂದಿನ ನಡೆಯಾಗಿ ದೇವರ ಸಾನಿಧ್ಯದಲ್ಲಿ ಶಿವ ಪಂಚಾಕ್ಷರಿ ಜಪವನ್ನು ನಿರಂತರ 12 ದಿವಸಗಳ ಕಾಲ ಪಠಿಸಿ ಕೊನೆಯ ದಿನ ಶತರುದ್ರ ಹಾಗೂ ಸಹಸ್ರಾಧಿಕ ನಾಳಿಕೇರಾಭಿಷೇಕ ನಡೆಸಲಾಗಿದೆ. ಈ ಎಲ್ಲಾ ವಿಷಯಗಳಲ್ಲಿಯೂ ತೊಡಗಿಸಿಕೊಂಡವರು ಪಕ್ಷಾತೀತವಾಗಿ ಭಕ್ತಾದಿಗಳೇ ಹೊರತು ಯಾವುದೇ ಕೃಪಾಪೋಷಿತ ಪಕ್ಷದಿಂದ ಅಲ್ಲ ಎಂದು ಹೇಳಿದರು.
2003ರಿಂದ ಇದುವರೆಗೆ ದೇವಸ್ಥಾನದ ಎಲ್ಲಾ ಆಡಳಿತ ಮಂಡಳಿಯ ಅವಧಿಯ ಎಲ್ಲಾ ಲೆಕ್ಕಾಚಾರದ ತನಿಖೆ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರು ಮಾಡಿದ ಎಲ್ಲಾ ಆರೋಪಗಳಿಗೆ ಶಂಕರ್ ಕುಮಾರ್ ಮುಚ್ಚಿಲ, ಚಂದ್ರಶೇಖರ ಶಾಸ್ತ್ರಿ, ಪ್ರಕಾಶ್ ಜಾಕೆ, ಅಂಕುಶ್ ಕುದ್ವ, ಶರತ್ ಕುದ್ವ ಹಾಗು ನಾರಾಯಣ ಕೃಷ್ಣನಗರ ಅವರು ತಿರುಗೇಟು ನೀಡಿದರು.








