ಬೆಂಗಳೂರು: ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ 107 ರನ್ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 8 ವಿಕೆಟ್ಗಳ ಗೆಲುವು ಸಾಧಿಸಿತು. ಇದರೊಂದಿಗೆ 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿತು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ಇನಿಂಗ್ಸ್ನಲ್ಲೂ ಲೀಲಾಜಾಲವಾಗಿ ಬ್ಯಾಟ್ ಬೀಸಿದ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಭಾರತಕ್ಕೆ ಸೋಲುಣಿಸಿದರು. ಹೀಗಾಗಿ, ಮೂರು ಪಂದ್ಯಗಳ ಸರಣಿಯಲ್ಲಿ
ಕಿವೀಸ್ ಬಳಗಕ್ಕೆ 1–0 ಅಂತರದ ಮುನ್ನಡೆ ದೊರೆಯಿತು.ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ರವೀಂದ್ರ, ಈ ಬಾರಿ 46 ಎಸೆತಗಳಲ್ಲಿ 39 ರನ್ಗಳಿಸಿ ಅಜೇಯವಾಗಿ ಉಳಿದರು. ಯಂಗ್, 76 ಎಸೆತಗಳಲ್ಲಿ 48 ರನ್ ಗಳಿಸಿದರು.ಖಾತೆ ತೆರೆಯದಿದ್ದರೂ ವಿಕೆಟ್ ಕೊಡದೆ ನಾಲ್ಕನೇ ದಿನದಾಟ ಮುಗಿಸಿದ್ದ ಪ್ರವಾಸಿ ಪಡೆಗೆ, ವೇಗಿ ಜಸ್ಪ್ರಿತ್ ಬೂಮ್ರಾ 5ನೇ ದಿನದ ಆರಂಭದಲ್ಲೇ ಆಘಾತ ನೀಡಿದರು. 4 ಎಸೆತಗಳನ್ನು ಎದುರಿಸಿ ಕ್ರೀಸ್ ಕಾಯ್ದುಕೊಂಡಿದ್ದ ನಾಯಕ ಟಾಮ್ ಲಥಾಮ್ ದಿನದ 2ನೇ ಎಸೆತದಲ್ಲೇ ಎಲ್ಬಿ ಬಲೆಗೆ ಬಿದ್ದರು.ಇದರಿಂದ ಭಾರತ ಪಾಳಯದಲ್ಲಿ
ನಿರೀಕ್ಷೆಗಳು ಗರಿಗೆದರಿದ್ದವು. ತಂಡದ ಮೊತ್ತ 35 ರನ್ ಆಗಿದ್ದಾಗ ಡೆವೋನ್ ಕಾನ್ವೇ (17 ರನ್) ಅವರನ್ನೂ ಪೆವಿಲಿಯನ್ಗೆ ಅಟ್ಟಿದ ಬೂಮ್ರಾ, ಆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದರು. ಆದರೆ, ರವೀಂದ್ರ ಮತ್ತು ಯಂಗ್ ಅದಕ್ಕೆ ಅವಕಾಶ ನೀಡಲಿಲ್ಲ. ಇವರಿಬ್ಬರು ಮುರಿಯದ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 72 ರನ್ ಗಳಿಸಿದರು. ಹೀಗಾಗಿ ಕಿವೀಸ್ ಪಡೆ 27.4ನೇ ಓವರ್ನಲ್ಲಿ 110 ರನ್ ಕಲೆಹಾಕಿ ಗೆಲುವಿನ ನಗು ಬೀರಿತು.ಮೊದಲ ಇನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗುವ ಮೂಲಕ 356 ರನ್ಗಳ ಭಾರಿ ಹಿನ್ನಡೆ ಅನುಭವಿಸಿದ್ದ ಭಾರತ, ತನ್ನ ಎರಡನೇ ಇನಿಂಗ್ಸ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮರು ಹೋರಾಟ ನೀಡಿತು.ಯುವ ಬ್ಯಾಟರ್ ಸರ್ಪರಾಜ್ ಖಾನ್ (150 ರನ್) ಶತಕ ಹಾಗೂ ನಾಯಕ ರೋಹಿತ್ ಶರ್ಮಾ (52), ವಿರಾಟ್ ಕೊಹ್ಲಿ (70), ರಿಷಭ್ ಪಂತ್ (99) ಗಳಿಸಿದ ಅರ್ಧಶತಕಗಳ ಬಲದಿಂದ 462 ರನ್ ಗಳಿಸಿತ್ತು.ಹೀಗಾಗಿ, ಸುಲಭ ಜಯದ ಲೆಕ್ಕಾಚಾರದಲ್ಲಿದ್ದ ಕಿವೀಸ್, ಹೋರಾಟ ನಡೆಸಿಯೇ ಗೆಲ್ಲುವಂತಾಯಿತು.
ಮುಂದಿನ ಪಂದ್ಯವು ಪುಣೆಯಲ್ಲಿ ಅಕ್ಟೋಬರ್ 24ರಂದು ಆರಂಭವಾಗಲಿದೆ.