ಸುಳ್ಯ: ಸುದೀರ್ಘ ಎಂಟು ವರ್ಷಗಳೇ ಕಳೆದರೂ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಕಂದಾಯ ಇಲಾಖೆ ಮೀನಾ ಮೇಷ ಎಣಿಸುತಿದೆ. ಸಂತ್ರಸ್ತರಿಗೆ ನಿವೇಶನ ಹಸ್ತಾಂತರ ಮಾಡುವ ತನಕ ಹೋರಾಟ ನಡೆಸಲಾಗುವುದು ಎಂದು
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹಾಗು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಮುಂದಿಟ್ಟು
ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಈಗಾಗಲೇ ದೂರು ಸಲ್ಲಿಸಲಾಗಿದೆ.ಕೊಲ್ಲಮೊಗ್ರ ನಿವೇಶನ ರಹಿತರಿಗೆ ಕಳೆದ 7-8 ವರ್ಷಗಳಿಂದ ನಿವೇಶನ ಹಂಚಿಕೆಯಾಗದೇ ನಿವೇಶನ ರಹಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಸುಳ್ಯ ತಾಲೂಕಿನಲ್ಲಿ ಬಹುತೇಕ
ಜಮೀನುಗಳ ಪಹಣಿಯಲ್ಲಿ ಕಲಂ 11ರಲ್ಲಿ ಭಾಗಷಃ ಅರಣ್ಯ ಎಂದು ನಮೂದಾಗಿದ್ದು, ಭೂಮಿ ಹಂಚಿಕೆಯ ಪ್ರತಿ ಸಂದರ್ಭದಲ್ಲಿಯೂ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಕೇಳುವುದರಿಂದವ ಭೂಮಿ ಹಂಚಿಕೆ ವಿಳಂಬ ಆಗುತಿದೆ.ಇದರಿಂದ ತಾಲೂಕಿನ ಬಡವರಿಗೆ ಬಹಳಷ್ಟು ಸಮಸ್ಯೆಗಳಾಗುತಿದೆ. ಕೊಲ್ಲಮೊಗ್ರದಲ್ಲಿ ಇದೇ ಪ್ರದೇಶದಲ್ಲಿ ಈ ಹಿಂದೆ ಭೂಮಿ ಹಂಚಿಕೆ ಮಾಡಿದ್ದರೂ, ನೆರೆ ಸಂತ್ರಸ್ತರಿಗೆ ಭೂಮಿ ನೀಡಲು ವಿಳಂಬ ನೀತಿ ಅನುಸರಿಸಲಾಗುತಿದೆ.
ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಿವೇಶನ ರಹಿತರಿಗೆ ಇನ್ನೂ ಭೂಮಿ ನೀಡಿಲ್ಲ ಎಂದ ಅವರು ಈ ಬಗ್ಗೆ ವರದಿಯ ಪ್ರತಿ ಸಹಿತ ಸಚಿವರುಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು. ಅಕ್ರಮ ಸಕ್ರಮ, ಮತ್ತು 94 ಸಿ ಸೇರಿದಂತೆ ಬಡವರಿಗೆ ಸರಕಾರ ನೀಡುವ ಸೌಲಭ್ಯವನ್ನು ಸಮರ್ಪಕವಾಗಿ ಜನರಿಗೆ ಸಿಗುತ್ತಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕರುಣಾಕರ ಅಡ್ಪಂಗಾಯ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ , ರಫೀಕ್ ಐವತ್ತೊಕ್ಲು ಉಪಸ್ಥಿತರಿದ್ದರು.








