ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿರುವ ವಿವಿಧ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 25 ಕೋಟಿ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದರು.ಕ್ಷೇತ್ರದ 8 ಪ್ರಮುಖ ರಸ್ತೆಗಳ
ಅಭಿವೃದ್ಧಿ ಕಾಮಗಾರಿಗೆ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಸುಳ್ಯ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಅಭಿವೃದ್ಧಿಗೆ 3 ಕೋಟಿ, ಕಡಬ ತಾಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಗೆ 4 ಕೋಟಿ, ಜಿಲ್ಲಾ ಮುಖ್ಯ ರಸ್ತೆಗಳಾದ ಸುಳ್ಯ ತಾಲೂಕಿನ ಎಲಿಮಲೆ–ಅರಂತೋಡು ರಸ್ತೆಗೆ 4.50 ಕೋಟಿ, ಅಯ್ಯನಕಟ್ಟೆ ಭಾಗದ ರಸ್ತೆ ಅಭಿವೃದ್ಧಿಗೆ 4.50 ಕೋಟಿ,
ಮಂಡೆಕೋಲು ರಸ್ತೆಯ ಮರುಡಾಂಬರೀಕರಣಕ್ಕೆ 2 ಕೋಟಿ, ಕಡಬ ತಾಲೂಕಿನ ಸುಬ್ರಹ್ಮಣ್ಯ– ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ 2 ಕೋಟಿ, ಕಡಬ ತಾಲೂಕಿನ
ಪೆರ್ವಾಜೆ ಭಾಗದ ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ 2 ಕೋಟಿ, ನೆಲ್ಯಾಡಿ ಭಾಗದ ಎನ್.ಎಚ್. 75 ಹಾಗೂ ಎಸ್.ಎಚ್. 113 ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ 3 ಕೋಟಿ ಸೇರಿ ಒಟ್ಟು 25 ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಗ್ರಾಮೀಣ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅನುದಾನ ಮಂಜೂರು ಮಾಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಚಿವರಲ್ಲಿ ಕೋರಲಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.














