ಸುಳ್ಯ: ಕಸ ವಿಲೇವಾರಿ ವಿಚಾರದಲ್ಲಿ ಕಲ್ಚರ್ಪೆ ಪರಿಸರ ಹೋರಾಟ ಸಮಿತಿಯವರು ಮಾಡಿರುವ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ತನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಕಲ್ಚರ್ಪೆಯ ವನದುರ್ಗಾ ದೇವಿ ದೈವಸ್ಥಾನದಲ್ಲಿ ಪ್ರಮಾಣ ಮಾಡುತ್ತೇನೆ. ಆರೋಪ ಮಾಡಿದವರು ದೈವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಕಲ್ಚರ್ಪೆಯ ಕಸದಿಂದ
ವಿನಯ ಕಂದಡ್ಕರಿಗೆ ರಸ ಬರುತಿದೆ, ಕಲ್ಚರ್ಪೆ ಚಿನ್ನದ ಗಣಿಯಂತಾಗಿದೆ ಎಂದು ತನ್ನ ಮೇಲೆ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಆರೋಪ. ಇದರ ಬಗ್ಗೆ ಸತ್ಯಪ್ರಮಾಣಕ್ಕೆ ಸಿದ್ಧ. ಆರೋಪ ಮಾಡಿದವರು ದಿನಾಂಕ ನಿಗದಿ ಮಾಡಿ ಹೇಳಲಿ ನಾನು ಪ್ರಮಾಣಕ್ಕೆ ಹೋಗುತ್ತೇನೆ. ಇಲ್ಲದಿದ್ದರೆ ನಾನೇ ಪ್ರಮಾಣಕ್ಕೆ ಕರೆಯುತ್ತೇನೆ, ಅವರು ಬಂದು ಪ್ರಮಾಣ ಮಾಡಲಿ. ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಕಸ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ.
ಕಲ್ಚರ್ಪೆಯಲ್ಲಿ ಈ ಹಿಂದೆ ಇದ್ದ ಅವಸ್ಥೆ ಈಗ ಇದೆಯೇ ಎಂಬುದನ್ನು ಸ್ಥಳೀಯರು ಹೇಳಬೇಕು. ನಗರ ಪಂಚಾಯತ್ ಮುಂಭಾಗದ ಕಸವನ್ನು ಸಂಪೂರ್ಣ ತೆರವು ಮಾಡಲಾಗಿದೆ, ಕಲ್ಪರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಿದ ಮೇಲೆ ಸಮಸ್ಯೆ ಸಾಕಷ್ಟು ಸುಧಾರಿಸಿದೆ. ಪ್ರತಿ ದಿನ ಅಲ್ಲಿ ಕಸ ಬರ್ನ್ ಮಾಡಲಾಗುತಿದೆ, ಅದಕ್ಕೆ ದಾಖಲೆ ಇದೆ. ಅಲ್ಲಿ ತುಂಬಿರುವ ಕಸವನ್ನೂ ತೆರವು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡಲಾಗುವುದು. ಅಲ್ಲಿಯ ಜನರ ಸಮಸ್ಯೆಯನ್ನು ಪರಿಹರಿಸಲು ನಗರ ಪಂಚಾಯತ್ ಬದ್ಧವಾಗಿದೆ. ಆದರೆ ಹೊರಗಿನಿಂದ ಬಂದ ಕೆಲವರು ಅಲ್ಲಿ ಸಮಸ್ಯೆ ಸೃಷ್ಠಿ ಮಾಡುತ್ತಿದ್ದಾರೆ ಎಂದು ದೂರಿದರು.
ಕಸ ವಿಲೇವಾರಿಗೆ ಬೇರೆ ಸ್ಥಳ ಗುರುತಿಸಲಾಗಿದೆ ಎಂದು ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ನಗರದ ಕಸ ವಿಲೇವಾರಿಗೆ ಬೇರೆ ಸ್ಥಳ ಗುರುತಿಸಲು, ನಿವೇಶನ ಒದಗಿಸಲು ಪ್ರಸ್ತಾಪ ಇದ್ದರೂ ಕಂದಾಯ ಇಲಾಖೆ ಸ್ಥಳ ಗುರುತಿಸಿ ನಗರ ಪಂಚಾಯತ್ಗೆ ನೀಡಿಲ್ಲ ಎಂದು ವಿನಯಕುಮಾರ್ ಕಂದಡ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಾತನಾಡಿ’ ಕಲ್ಚರ್ಪೆಯ ಜನರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತೇವೆ. ಈ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರಾದ ಸುಧಾಕರ ಕುರುಂಜಿಗುಡ್ಡೆ, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಸುಶೀಲಾ ಜಿನ್ನಪ್ಪ, ಶೀಲಾ ಅರುಣ ಕುರುಂಜಿ ಉಪಸ್ಥಿತರಿದ್ದರು.