ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ ಅ.3 ಮತ್ತು 4 ರಂದು ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಜಿ.ಪಿ.ಸಂಶುದ್ದೀನ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು ಅಮೆಚೂರು ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ನಿಯಮಾವಳಿಗಳಂತೆ ನಡೆಯುವ ಹೊನಲು ಬೆಳಕಿನ ಮ್ಯಾಟ್ ಪಂದ್ಯಾಟದಲ್ಲಿ ವಿವಿಧ ರಾಜ್ಯಗಳ ಆಹ್ವಾನಿತ 12 ಪುರುಷ ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.ಮೂರನೇ ಬಾರಿ ಸುಳ್ಯದಲ್ಲಿ ಕಬಡ್ಡಿ ಉತ್ಸವ ಸಂಘಟಿಸಲಾಗುತಿದೆ ಎಂದ ಅವರು ವಿಜೇತ

ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷ, ದ್ವಿತೀಯ ಬಹುಮಾನ 70 ಸಾವಿರ, ತೃತೀಯ ಮತ್ತು ಚತುರ್ಥ ಬಹುಮಾನ ತಲಾ 35 ಸಾವಿರದಂತೆ ನೀಡಲಾಗುವುದು ಎಂದು ವಿವರಿಸಿದರು.ಸುಳ್ಯ ಕಬಡ್ಡಿ ಉತ್ಸವದ ಪೋಸ್ಟರ್ನ್ನು ಸಂಘದ ಪದಾಧಿಕಾರಿಗಳು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಸಲಹೆಗಾರರಾದ ಜಿ.ಜಿ.ನಾಯಕ್, ಶಿವಪ್ರಕಾಶ್, ಕಾರ್ಯದರ್ಶಿ ಶಿವಪ್ರಸಾದ್.ಕೆ, ಖಜಾಂಜಿ ಎಸ್.ಎ.ಶಾಫಿ, ಸದಸ್ಯರಾದ ಶೇಖರ, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.









