ಸುಳ್ಯ:ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಗೃಹಜ್ಯೋತಿ ಪರಿಶೀಲನೆ ನಡೆಯುತ್ತಿದ್ದು ಈಗಾಗಲೇ ಶೇ.88 ಪ್ರಗತಿ ಸಾಧಿಸಲಾಗಿದೆ ಎಂದು
ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದರು.ಆ.31 ಕೊನೆಯ ದಿನವಾಗಿರುವುದರಿಂದ ಗುರಿ ತಲುಪಲು ಅಧಿಕಾರಿಗಳು ಸರ್ವ ಪ್ರಯತ್ನ ನಡೆಸಬೇಕು ಎಂದು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಮಾಹಿತಿ ನೀಡಿದ ಸುಳ್ಯ ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ಅವರು, ಗೃಹಜ್ಯೋತಿ ಯೋಜನೆಯಲ್ಲಿ ಸುಳ್ಯ ಮೆಸ್ಕಾಂ ವಿಭಾಗದಲ್ಲಿ 25,947 ಗುರಿ ನೀಡಲಾಗಿದ್ದು 22776 ಪ್ರಗತಿ ಸಾಧಿಸಲಾಗಿದೆ. 3171 ಮನೆಗಳು ಬಾಕಿ ಇದ್ದು ಅದರಲ್ಲಿ 1470 ಮಂದಿ ತಾಂತ್ರಿಕ ಕಾರಣಗಳಿಂದ ಬಾಕಿಯಾಗಿದ್ದರೆ,1701 ಬಾಕಿ ಇದೆ ಎಂದರು.
ಸುಬ್ರಹ್ಮಣ್ಯ ಮೆಸ್ಕಾಂ ಎ.ಇ.ಇ. ಸತೀಶ್ ಸಫಲ್ಯರು ಮಾಹಿತಿ ನೀಡಿ ಸುಬ್ರಹ್ಮಣ್ಯ ಉಪವಿಭಾಗದಲ್ಲಿ 12923 ಗುರಿ ನೀಡಲಾಗಿದ್ದು, 11476 ಪ್ರಗತಿ ಆಗಿದೆ. 1447 ಒಟ್ಟು ಬಾಕಿ ಇದ್ದು, ಅದರಲ್ಲಿ ಮನೆ ಭೇಟಿ 420 ಮಾತ್ರ ಬಾಕಿ ಇದೆ ಎಂದರು. ತಾಂತ್ರಿಕ ಕಾರಣಗಳಿಂದ ಕೆಲವು ಬಾಕಿಇದೆ. ಗುರಿ ತಲುಪಲು ಪ್ರಯತ್ನ ನಡೆಸಲಾಗುವುದು ಎಂದರು. ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ ಆ.31 ಕೊನೆಯ

ದಿನವಾಗಿರುವುದರಿಂದ ಗೃಹಜ್ಯೋತಿಯಲ್ಲಿ ತಾಲೂಕಿನಲ್ಲಿ ಗುರಿ ತಲುಪಬೇಕು. ಆದ್ದರಿಂದ ಬಾಕಿ ಇರುವುದನ್ನು ಆದಷ್ಟು ಶೀಘ್ರ ವಾಗಿ ಪ್ರಯತ್ನಿಸಿ. ದಾಖಲೆ ನೀಡದಿದ್ದರೆ ಗೃಹಜ್ಯೋತಿ ಯೋಜನೆ ಸಿಗದಂತಾದೀತು.ಈ ಕುರಿತು ಆ ಮನೆಯವರಿಗೆ ತಿಳಿಸಬೇಕು ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಶೇಖರ ಕಣೆಮರಡ್ಕ, ಈಶ್ವರ ಆಳ್ವ, ಶಿಲ್ಪಾ ಇಬ್ರಾಹಿಂ ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟ ಫಲಾನುಭವಿಗಳ 87 ಮನೆಯವರು ಹಣ ಡ್ರಾ ಮಾಡಿರುವುದು ಕಂಡು ಬಂದಿದ್ದು ಈ ಕುರಿತು ಬ್ಯಾಂಕ್ ನವರ ಮೂಲಕ ಮನೆಯವರ ಮನವೊಲಿಸಿ ಹಣ ಮರುಪಾವತಿಗೆ ಪ್ರಯತ್ನ ನಡೆಸಲಾಗುವುದು ಎಂದು ಸಿಡಿಪಿಒ ಶೈಲಜಾ ಮಾಹಿತಿ ನೀಡಿದರು.ಈ ಕುರಿತು ಬ್ಯಾಂಕ್ ನಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಮತ್ತು ಎಲ್ಲ ಮನೆಯವರಿಗೂ ಹಣ ವಾಪಾಸ್ಸಾತಿಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ಈ ವಿಚಾರದಲ್ಲಿ ಸದಸ್ಯರು ಕೆಲವು ಸಲಹೆಗಳನ್ನು ನೀಡಿದರು.
ಪಡಿತರ ಪಡೆಯುವ ಗ್ರಾಹಕರ ಇಕೆವೈಸಿ ಪಡೆಯುವ ಕಾರ್ಯ ಸೆ.1ರಿಂದ ನಡೆಯಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯದ ಅಕ್ಕಿ ಅಂಗಡಿಯಲ್ಲಿ ಮಾರಾಟ ಮಾಡುವ ಕುರಿತು ದೂರುಗಳು ಬಂದಿವೆ. ಈ ಕುರಿತು ಪರಿಶೀಲನೆ ಮಾಡುವಂತೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದರು.ಕೊಡಿಯಾಲ, ಮಂಡೆಕೋಲು, ಅಜ್ಜಾವರ ಭಾಗದ ಬಸ್ ಸೌಲಭ್ಯ ಕುರಿತು ಶೇಖರ್ ಕಣೆಮರಡ್ಕ, ಈಶ್ವರ ಆಳ್ವ, ಅಬ್ಬಾಸ್ ಪ್ರಸ್ತಾಪಿಸಿದರು.
ಸದಸ್ಯ ಕಾರ್ಯದರ್ಶಿ, ತಾ.ಪಂ. ಇ.ಒ. ರಾಜಣ್ಣ ಕಲಾಪ ನಡೆಸಿದರು. ಸದಸ್ಯರುಗಳಾದ ರವಿ ಗುಂಡ್ಯಡ್ಕ, ಭವಾನಿ ಬೊಮ್ಮೆಟ್ಟಿ, ರಾಜು ನೆಲ್ಲಿಕುಮೇರಿ ಜಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.









