ಆ್ಯಮ್ಸ್ಟೆಲ್ವೀನ್: ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಅಭಿಷೇಕ್ ಅವರ ಅವರ ಅಮೋಘ ಆಟದಿಂದ ಭಾರತ ತಂಡವು ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಿತು. ಇದರೊಂದಿಗೆ ಟೂರ್ನಿಯ ಎರಡನೇ ಹಂತಕ್ಕೆ ಅರ್ಹತೆ ಗಿಟ್ಟಿಸಿತು. ವಾಗ್ನರ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಡಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ
5–3ರಿಂದ ಜಯಿಸಿತು. ಎರಡು ಪೆನಾಲ್ಟಿ ಕಾರ್ನರ್ಗಳಲ್ಲಿ (5ನೇ ಮತ್ತು 21ನೇ ನಿಮಿಷ) ಗೋಲು ಗಳಿಸಿದ ಹರ್ಮನ್ಪ್ರೀತ್ ತಂಡಕ್ಕೆ ಗೆಲುವಿಗೆ ಬಲ ತುಂಬಿದರು. ಅಭಿಷೇಕ್ ಅವರು 11 ಮತ್ತು 24ನೇ ನಿಮಿಷಗಳಲ್ಲಿ ಎರಡು ಫೀಲ್ಡ್ ಗೋಲು ಗಳಿಸಿದರು. ಉಪನಾಯಕ ಹಾರ್ದಿಕ್ ಸಿಂಗ್ 35ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಒಟ್ಟು ಆರು ಅಂಕ ಗಳಿಸಿರುವ ಭಾರತವು ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಿತು. ಆದರೆ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋತಿದ್ದರಿಂದ 3 ಅಂಕಗಳನ್ನು ಕಳೆದುಕೊಂಡಿದೆ. ಇಂಗ್ಲೆಂಡ್ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಪಾಕಿಸ್ತಾನ ತಂಡದ
ಹನಾನ್ ಶಹೀದ್ (22ನಿ, 46ನಿ)ಮತ್ತು ಸೂಫಿಯಾನ್ ಖಾನ್ (24ನೇ ನಿ) ಗೋಲು ಹೊಡೆದರು. ಪಾಕ್ ತಂಡವು ಎಂಟು ವರ್ಷಗಳ ನಂತರ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದೆ. ಪಂದ್ಯದಲ್ಲಿ ಭಾರತ ತಂಡವು ಆರಂಭದಿಂದಲೇ ಪಾರಮ್ಯ ಮೆರೆಯಿತು. ಹರ್ಮನ್ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಖಾತೆ ತೆರೆದರು. ಅಭಿಷೇಕ್ ಎರಡನೇ ಗೋಲು ಹೊಡೆದರೆ, ಇನ್ನೊಂದನ್ನು ಹರ್ಮನ್ಪ್ರೀತ್ ಗಳಿಸಿದರು. ಇದಾಗಿ ಮೂರು ನಿಮಿಷ ಕಳೆಯುವಷ್ಟರಲ್ಲಿ ಅಭಿಷೇಕ್ ಮಿಂಚಿದರು. ಒಂದು ರೀತಿಯಲ್ಲಿ ಹರ್ಮನ್ ಮತ್ತು ಅಭಿಷೇಕ್ ಅವರು ಪೈಪೋಟಿಗೆ ಬಿದ್ದು ಗೋಲು ಬಾರಿಸಿದರು.







