ಮಡಿಕೇರಿ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಎರಡು ದಿನಗಳ ಕರ್ನಾಟಕದ ಉತ್ತರ ಭಾಗದ ವಾಡೆ ಮನೆಗಳ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಯಿತು. ಅರೆಭಾಷಿಕರ ಐನ್ ಮನೆಗಳು ಹಾಗೂ ವಾಡೆ ಮನೆಗಳ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರ ನೇತೃತ್ವದ ಅಧ್ಯಯನ ಪ್ರವಾಸದ ವೇಳೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿರುವ ಸುಮಾರು 850 ವರ್ಷದ ಭವ್ಯ ಇತಿಹಾಸ ವಿರುವ ಚಚಡಿ ದೇಸಾಯಿ ವಾಡೆಯನ್ನು ಪ್ರಧಾನವಾಗಿ ವೀಕ್ಷಿಸಿ ಅಧ್ಯಯನ ನಡೆಸಲಾಯಿತು. ವಾಡೆಯಲ್ಲಿ ಪ್ರಸ್ತುತ ವಾಸ್ತವ್ಯವಿರುವ ನಾಗರಾಜ ದೇಸಾಯಿಯವರು ಮಾಹಿತಿ ನೀಡಿದರು. 12ನೇ ಶತಮಾನದಲ್ಲಿ ರಟ್ಟರ ರಾಜವಂಶದ ಎರಡನೇಯ ಕಾರ್ತ್ಯವೀರ ನಿರ್ಮಿಸಿದ ಈ ಮಹಲ್ ಕೋಟೆಯಿಂದ ಆವೃತವಾಗಿದ್ದು 25 ತಲೆಮಾರುಗಳನ್ನು ಕಂಡಿದ್ದು ಇದೀಗ 26ನೇ ತಲೆಮಾರಿನ ದೇಸಾಯಿ ಕುಟುಂಬ ಇದನ್ನು ಮುನ್ನಡೆಸುತ್ತಿದೆ.
ಚಚಡಿ ವಾಡೆ ವೀಕ್ಷಣೆ ಬಳಿಕ ಅಧ್ಯಯನ ತಂಡವು ಸವದತ್ತಿ ತಾಲೂಕಿನ ರುದ್ರಾಪುರದಲ್ಲಿರುವ ರುದ್ರಾಪುರ ವಾಡೆಯನ್ನು ವೀಕ್ಷಿಸಿತು. ಉದಯ ಕುಮಾರ್ ಅವರ ವಶದಲ್ಲಿರುವ ವಾಡೆಯು ಚಿಕ್ಕ ವಾಡೆಯಾದರೂ ಇಂದಿಗೂ ತನ್ನ ಪುರಾತನ ಭವ್ಯತೆಯನ್ನು ಉಳಿಸಿಕೊಂಡಿದೆ. ಬಳಿಕ ಅಧ್ಯಯನ ತಂಡವು ತಲ್ಲೂರು ವಾಡೆಯನ್ನು ವೀಕ್ಷಿಸಿತು. ತಲ್ಲೂರು ವಾಡೆಯು ಮುಖ್ಯವಾಗಿ ಕಿತ್ತೂರು ಸಂಸ್ಥಾನದ ರಾಜಮನೆತನದೊಂದಿಗೆ ಐತಿಹಾಸಿಕ ಒಡನಾಟವನ್ನು ಹೊಂದಿದ್ದ ವಾಡೆಯಾಗಿರುತ್ತದೆ. ಇಲ್ಲಿ ವಾಸ್ತವ್ಯವಿದ್ದ ಅನಿಲ್ ಕುಮಾರ್ ದೇಸಾಯಿ ಅವರು ವಾಡೆಯ ಕುರಿತು ವಿವರ ನೀಡಿದರು.
ಅಧ್ಯಯನದ ವೇಳೆ ತಂಡವು ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಕೇಸರಕೊಪ್ಪ ಗ್ರಾಮದಲ್ಲಿರುವ ಕಿತ್ತೂರು ಶಾಸಕರಾದ ಬಾಬೂ ಸಾಹೇಬ ಪಾಟೀಲರು ವಾಸ್ತವ್ಯ ಇರುವ ವಾಡೆಗೂ ಭೇಟಿ ನೀಡಿತು.
ತಂಡವು ವಾಡೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡುದಲ್ಲದೆ, ಅಕಾಡೆಮಿಯ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಿತು. ಶಾಸಕರು ಹಾಗೂ

ಅವರ ಪತ್ನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರೋಹಿಣಿ ಪಾಟೀಲ್ ಅವರನ್ನು ಈ ಸಂದರ್ಭದಲ್ಲಿ ಅಕಾಡೆಮಿ ವತಿಯಿಂದ ಶಾಲು ಹೊದಿಸಿ ಹೂಗುಚ್ಛ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು. ಪಾಟೀಲ್ ದಂಪತಿಗಳು ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಶಾಲು ಹೊದಿಸಿ ಗೌರವಿಸಿದರು.
ಪ್ರವಾಸದ ಉಸ್ತುವಾರಿಯನ್ನು ಸದಸ್ಯ ಸಂಚಾಕರಾದ ಡಾ. ಜ್ಞಾನೇಶ್ ಎನ್.ಎ ವಹಿಸಿದ್ದರು.ತಂಡದಲ್ಲಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್. ಕಾರ್ಯಪ್ಪ, ಸೂದನ್ ಎಸ್. ಈರಪ್ಪ, ಪಿ.ಎಂ. ಸಂದೀಪ್, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಮೋಹನ್ ಪೊನ್ನಚನ, ಪ್ರಕಾಶ್ ಕುದುಪಜೆ ಇದ್ದರು.
ಧಾರವಾಡದವರಾಗಿರುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕು ಕಾರ್ಯನಿರ್ವಹಣಾಧಿಕಾರಿ ಟಿ. ವೈ. ದಾಸನಕೊಪ್ಪ ಹಾಗೂ ಅಧ್ಯಯನ ಪ್ರವಾಸಕ್ಕಾಗಿ ಸವದತ್ತಿ ತಾಲೂಕು ಪಂಚಾಯತ್ ನಿಯೋಜನೆ ಮಾಡಿದ ರುದ್ರಾಪುರ ಗ್ರಾಮ ಪಂಚಾಯತ್ ಅಧಿಕಾರಿ ವಿಜಯ ಕುಮಾರ್ ಅಂಗಡಿ ಅವರು ಎರಡು ದಿನಗಳ ಪ್ರವಾಸದ ವೇಳೆ ತಂಡಕ್ಕೆ ಮಾರ್ಗದರ್ಶಕರಾಗಿದ್ದರು.









