ಗಾಲ್: ಭಾರತ ತಂಡವು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕನ್ನಡಿಗರಾದ ದೇವದತ್ತ ಪಡಿಕ್ಕಲ್ (167 ರನ್), ಕೆ.ಎಲ್. ರಾಹುಲ್ (82) ಅಮೋಘ ಆಟದ ಬಲದಿಂದ, ಮೊದಲ ಇನಿಂಗ್ಸ್ನಲ್ಲಿ
462 ರನ್ ಕಲೆಹಾಕಿತು.ಇದಕ್ಕೆ ಉತ್ತರವಾಗಿ ಮೂರನೇ ದಿನ ಬ್ಯಾಟಿಂಗ್ ಮಾಡಿದ ಲಂಕಾ ಪಡೆ 284 ರನ್ ಗಳಿಸಿ ಆಲೌಟ್ ಆಯಿತು.ಕೇವಲ 90 ರನ್ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದ ಲಂಕಾ ಪಡೆಗೆ, ಸೊನಲ್ ದಿನುಶಾ ಮತ್ತು ನಿರೋಶಾನ್ ಡಿಕ್ವೆಲ್ಲಾ ಆಸರೆಯಾದರು. ಇವರಿಬ್ಬರು ಆರನೇ ವಿಕೆಟ್ ಪಾಲುದಾರಿಕೆಯಲ್ಲಿ 146 ರನ್ ಸೇರಿಸಿದರು. ಇದರಿಂದಾಗಿ
ಭಾರಿ ಮುನ್ನಡೆ ಸಾಧಿಸುವ ಅವಕಾಶ ಭಾರತದ ಕೈತಪ್ಪಿತು. ಆದರೆ, ಇವರಿಬ್ಬರು ಔಟಾದ ನಂತರ ಉಳಿದ ಆಟಗಾರರು ಹೆಚ್ಚುಹೊತ್ತು ನಿಲ್ಲಲಿಲ್ಲ.ಭಾರತದ ಪರ ಮಾನವ್ ಸುತಾರ್ 21.4 ಓವರ್ಗಳಲ್ಲಿ 76 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜ, 21 ಓವರ್ಗಳಲ್ಲಿ 57 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಹಾಗೂ ಕುಲದೀಪ್ ಯಾದವ್ ಒಂದೊಂದು ವಿಕೆಟ್ ಉರುಳಿಸಿದರು.








































