ಸುಳ್ಯ:ಧರ್ಮಶಾಸ್ತ್ರ ಆಧಾರಿತ ಜೀವನ, ಗೋ ಮತ್ತು ಕೃಷಿ ಆಧಾರಿತ ಬದುಕನ್ನು ನಡೆಸಿ ಪವಿತ್ರ ಭರತ ಭೂಮಿಯನ್ನು ಉಳಿಸಬೇಕಾದುದು ನಮ್ಮ ಜವಾಬ್ದಾರಿ ಎಂದು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ನ ಅಧ್ಯಕ್ಷ ಭಕ್ತಿಭೂಷಣ್ ದಾಸ್ ಹೇಳಿದ್ದಾರೆ. ಗೋಸೇವಾ
ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇದರ ಸಹಯೋಗದೊಂದಿಗೆ ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ನಂದಿ ರಥಯಾತ್ರೆ ಮಾ.15ರಂದು ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ
ನಂದಿ ರಥಯಾತ್ರೆಗೆ ನೀಡಿದ ಸ್ವಾಗತ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೋವು, ನಂದಿ ಓಡಾಡಿದ ಭೂಮಿ ಪವಿತ್ರವಾದುದು. ಆದರೆ ಇಂದು ಗೋವು, ನಂದಿಯ ಸಂತತಿ ವಿನಾಶದ ಅಂಚಿನಲ್ಲಿದೆ. ಫಲವತ್ತತೆ ಇಲ್ಲದೆ ಭೂಮಿ ಬಳಲಿದೆ, ಫಲವತ್ತತೆ ಇಲ್ಲದೆ ರಾಸಾಯನಿಕ ಬಳಸಿ ನಡೆಸುವ

ಕೃಷಿಯಿಂದ ಮನುಷ್ಯನ ಆರೋಗ್ಯ ಕೆಡುತಿದೆ, ಆದುದರಿಂದ ನಮ್ಮ ಭೂಮಿಯ ಫಲವತ್ತತೆ, ಮನುಷ್ಯನ ಆರೋಗ್ಯ ಉಳಿಸಲು ಗೋ ಸಂತತಿ, ನಂದಿ ಉಳಿಯಬೇಕು, ಗೋವು, ಭೂಮಿ, ಪ್ರಕೃತಿ ಉಳಿದರೆ ಗೋವು, ನಂದಿ ನಾವು ಉಳಿಯಲು ಸಾಧ್ಯ. ಗೋವು, ನಂದಿಯನ್ನು ಉಳಿಸುವ ಮೂಲಕ ಮಾತ್ರ ಭಾರತವನ್ನು ವಿಶ್ವಗುರುವಾಗಿಸಲು ಸಾಧ್ಯ ಎಂದು ಅವರು ಹೇಳಿದರು.
100ಕ್ಕೂ ಅಧಿಕ ಇದ್ದ ನಂದಿ ತಳಿಗಳು ಇಂದು ಕೇವಲ 30ರಷ್ಟು ತಳಿಗಳು ಮಾತ್ರ ಉಳಿದಿದೆ. ಇದನ್ನು ಉಳಿಸಬೇಕಾದುದು ನಮ್ಮ ಕರ್ತವ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ, ಒಡ್ಡೂರು ಫಾರ್ಮ್ ಅವರು ಮಾತನಾಡಿ ‘ ಗೋಮಾಳಗಳನ್ನು ರಚಿಸಿ ಗೋವುಗಳನ್ನು ಸ್ವತಂತ್ರವಾಗಿ ಬೆಳೆಸಬೇಕು. ಭೂಮಿಯ ಫಲವತ್ತತೆಯನ್ನು ಉಳಿಸಲು ಗೋವುಗಳನ್ನು ಉಳಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ನಂದಿ ರಥಯಾತ್ರೆಯ ಸ್ವಾಗತ ಸಮಿತಿಯ ಅಧ್ಯಕ್ಷ ಅಕ್ಷಯ್.ಕೆ.ಸಿ, ಕಾರ್ಯಾಧ್ಯಕ್ಷ ಪತಂಜಲಿ ಭಾರದ್ವಾಜ್, ಕೋಶಾಧಿಕಾರಿ ಸನತ್ ಪಿ.ಆರ್, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಸುಧಾಕರ ಕಾಮತ್, ಪಶು ವೈದ್ಯಾಧಿಕಾರಿಗಳಾದ ಸೂರ್ಯನಾರಾಯಣ, ಕೇಶವ ಸುಳ್ಳಿ ಉಪಸ್ಥಿತರಿದ್ದರು.

ನಂದಿ ರಥಯಾತ್ರೆಯ ಸಂಚಾಲಕರಾದ ರಾಜೇಶ್ ಮೇನಾಲ ಸ್ವಾಗತಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ ಡಿ.ಪಿ ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯಕ್ಕೆ ಆಗಮಿಸಿದ ರಥವನ್ನು ಜ್ಯೋತಿ ವೃತ್ತದಲ್ಲಿ ಸ್ವಾಗತಿಸಲಾಯಿತು. ನಂದಿ ರಥವನ್ನು ಸ್ವಾಗತಿಸಿ ಭವ್ಯ ಶೋಭಾಯಾತ್ರೆಯ ಮೂಲಕ ಶ್ರೀ ಚನ್ನಕೇಶವ ದೇವಸ್ಥಾನದ ಬಳಿಗೆ ರಥವನ್ನು ಕರೆ ತರಲಾಯಿತು.ಅಲ್ಲಿ ನಂದಿ ಪೂಜೆ, ವಿಷ್ಣು ಸಹಸ್ರನಾಮ
ಸಭಾ ಕಾರ್ಯಕ್ರಮ ನಡೆಯಿತು. ಪೊಳಲಿ ಕ್ಷೇತ್ರದಿಂದ ಡಿಸೆಂಬರ್ 31 ರಂದು ಪ್ರಾರಂಭಗೊಂಡು ರಾಜ್ಯದಾದ್ಯಂತ ಪ್ರಯಾಣಿಸುತ್ತಿರುವ ರಥಯಾತ್ರೆ ಇಂದು ಸುಳ್ಯಕ್ಕೆ ಆಗಮಿಸಿತು.