ಸುಳ್ಯ:ಜೀವನದಲ್ಲಿ ಸತ್ಯ, ನ್ಯಾಯ, ಪ್ರಾಮಾಣಿಕತೆಯಿಂದ ಬದುಕಿದರೆ ದೇವರ ಅನುಗ್ರಹ ಪಡೆಯಲು ಸಾಧ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಸುಳ್ಯದ ಬೂಡು ಶ್ರೀ ಸತ್ಯಪದಿನಾಜಿ, ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುವ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ದೇವರ ಮೇಲಿನ ನಂಬಿಕೆ ಮತ್ತು
ಸಂಪ್ರದಾಯದ ಮೂಲಕ ಬದುಕನ್ನು ರೂಪಿಸಬೇಕು. ಆ ಮೂಲಕ ದೇವಾಲಯಗಳ ಗುಡಿಯಂತೆ ಪ್ರತಿಯೊಬ್ಬರ ಬದುಕು ಸುಂದರವಾಗಬೇಕು ಎಂದು ಅವರು ಹೇಳಿದರು.

ಧಾರ್ಮಿಕ ಚಿಂತಕರಾದ ರಾಜೇಶ್ ಶೆಟ್ಟಿ ಮೇನಾಲ ಧಾರ್ಮಿಕ ಉಪನ್ಯಾಸ ನೀಡಿ ‘ ಮುಗ್ದ ಹಾಗೂ ನಿಷ್ಕಲ್ಮಶ ಭಕ್ತಿ ದೇವರಿಗೆ ಅತ್ಯಂತ ಪ್ರಿಯವಾದುದು. ಅಂತಹಾ ಭಕ್ತಿಗೆ ದೇವರು ಒಲಿಯುತ್ತಾನೆ ಎಂದರು. ಸಮಾಜಕ್ಕಾಗಿ, ಮಣ್ಣಿಗಾಗಿ ಬದುಕಿದ, ಅನ್ಯಾಯದ ವಿರುದ್ಧ ಹೋರಾಡಿದ ಶೌರ್ಯ ಪರಂಪರೆಯ ಮನುಷ್ಯರು ದೈವತ್ವವನ್ನು ಪಡೆಯುತ್ತಾರೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ,ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ನಗರ ಪಂಚಾಯತ್ ಸದಸ್ಯರಾದ ರಿಯಾಝ್ ಕಟ್ಟೆಕ್ಕಾರ್ಸ್, ಸುಧಾಕರ ಕುರುಂಜಿಭಾಗ್, ಶಿಲ್ಪಾ ಸುದೇವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಆದಿ ದ್ರಾವಿಡ ಯುವ ವೇದಿಕೆ ದ.ಕ.ಅಧ್ಯಕ್ಷ ಸುಂದರ ಅಡ್ಪಂಗಾಯ, ಪಯಸ್ವಿನಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಸ್ವಾಗತಿಸಿದರು. ಚೈತ್ರ, ತೃಪ್ತಿ ಪ್ರಾರ್ಥಿಸಿದರು. ಕವಿತಾ ಬೂಡು ವಂದಿಸಿದರು. ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತುಳುನಾಡ ಸತ್ಯೊಲು ಕಾನದ ಕಟದೆರ್ ತುಳು ಯಕ್ಷಗಾನ ಪ್ರದರ್ಶನಗೊಂಡಿತು.