ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದಲ್ಲಿ ಮುಂಬೈ ಪೋರ್ಟ್ ಸೆಮಿಫೈನಲ್ ಪ್ರವೇಶಿಸಿದೆ. ಎರಡನೇ ಕ್ವಾರ್ಟರ್ ಫೈನಲ್ನ ರೋಮಾಂಚಕಾರಿ ಪಂದ್ಯದಲ್ಲಿ ಮುಂಬೈ ಪೋರ್ಟ್ ತಂಡವು ಸಮಬಲದ
ಹೋರಾಟ ನೀಡಿದ ದೆಹಲಿಯ ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡವನ್ನು 39-35 ಪಾಯಿಂಟ್ ಅಂತರದಲ್ಲಿ ಮಣಿಸಿ ಎರಡನೇ ತಂಡವಾಗಿ ಸೆಮಿಫೈನಲ್ಗೆ ಪ್ರವೇಶ ಪಡೆಯಿತು. ಎರಡು ಬಲಿಷ್ಠ ತಂಡಗಳ ನಡುವೆ ನಡೆದ ರೋಮಾಂಚಕಾರಿ ಮತ್ತು ಜಿದ್ದಾ ಜಿದ್ದಿನ ಪಂದ್ಯದಲ್ಲಿ ಎರಡೂ ತಂಡಗಳು ಆರಂಭದಿಂದ ಕೊನೆಯ ತನಕ ಸಮಬಲದ ಹೋರಾಟ ನೀಡಿ ಭರ್ಜರಿ ಪ್ರದರ್ಶನ ನೀಡಿದವು.
ರಾಷ್ಟ್ರೀಯ ಮತ್ತು ಪ್ರೊ ಕಬಡ್ಡಿ ಆಟಗಾರರನ್ನು ಒಳಗೊಂಡ ಎರಡೂ ತಂಡಗಳು ಆರಂಭದಿಂದಲೇ ಭರ್ಜರಿ ದಾಳಿ ಮತ್ತು ಹಿಡಿತದ ಮೂಲಕ ಅಂಕಗಳನ್ನು ಪಡೆದು ಮಿಂಚಿನ ಕಬಡ್ಡಿ ಪ್ರದರ್ಶನ ನೀಡಿದವು. ಹಲವು ಬಾರಿ ಸ್ಕೋರ್ ಬೋರ್ಡ್ನಲ್ಲಿ ಸಮಬಲದ ಅಂಕ ಕಂಡು ಬಂದಿತ್ತು. ಎರಡೂ ತಂಡಗಳು ಭರ್ಜರಿ ಆಟವನ್ನು ಪ್ರದರ್ಶಿಸಿ ಅದ್ಭುತ ದಾಳಿ ಮತ್ತು ಹಿಡಿತದ ಮೂಲಕ ನೆರೆದ ಪ್ರೇಕ್ಷಕರಿಗೆ ರಸದೌತಣ ನೀಡಿದವು.
ಮುಂಬೈ ಪೋರ್ಟ್ ತಂಡಕ್ಕೆ ತೀವ್ರ ಪೈಪೋಟಿ ನೀಡಿದ ಮಿನಿಸ್ಟ್ರಿ ಆಫ್ ಡಿಫೆನ್ಸ್ ತಂಡ ಅಲ್ಪ ಅಂಕಗಳಿಂದ ಪಂದ್ಯವನ್ನು ಕಳೆದುಕೊಂಡು ಟೂರ್ನಿಯಿಂದ ಹೊರ ಬಿತ್ತು. ಮುಂಬೈ ಪರ ಪ್ರೊ ಕಬಡ್ಡಿ ಆಟಗಾರರಾದ ಶಾಹಿಲ್ ಪಾಟೀಲ್ ಹಾಗು ಪ್ರಫುಲ್ ಉತ್ತಮ ಪ್ರದರ್ಶನ ನೀಡಿದರು.









